ಬೆಂಗಳೂರು, ಸೆ 24 (Daijiworld News/MSP): ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಧ್ವಂಸಗೊಂಡಿರುವ ದೇವಾಲಯಗಳನ್ನ ಪುನರುಜ್ಜೀವನಗೊಳಿಸಲು ಮುಂದಾಗಿದೆ. ಹೌದು ಜಮ್ಮು ಕಾಶ್ಮೀರದಲ್ಲಿ ಧ್ವಂಸಗೊಂಡಿರುವ 50 ಸಾವಿರಕ್ಕೂ ಹೆಚ್ಚು ದೇಗುಲಗಳನ್ನು ಪುನರ್ ಸ್ಥಾಪನೆ ಮಾಡಲು ಮುಂದಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ, ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ್ರು.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆಯೇ ಹಲವು ಹಿಂದೂ ದೇವಾಲಯಗಳನ್ನ ಕಣಿವೆ ರಾಜ್ಯಗಳಲ್ಲಿ ಧ್ವಂಸಗೊಳಿಸಲಾಗಿದೆ. ಅಲ್ಲಿ ನಡೆದ ಸಂಘರ್ಷದ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಬಲವಂತವಾಗಿ ಹೊರಗೆ ಕಳುಹಿಸಲಾಗಿತ್ತು. ಅಲ್ಲದೆ ಅಲ್ಲಿದ್ದ ಪುರಾತನ ದೇವಾಲಯಗಳನ್ನು ಧ್ವಂಸಗೊಳಿಸಲಾಗಿತ್ತು. ಇದೀಗ ಈ ಸಂಬಂಧ ಕೇಂದ್ರ ಸರ್ಕಾರ ಗಮನ ಹರಿಸಿದ್ದು. ಧ್ವಂಸಗೊಂಡಿರೋ ದೇವಾಲಯಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಕಾಶ್ಮೀರದಲ್ಲಿ ಮುಚ್ಚಲಾಗಿರುವ ದೇವಾಲಯಗಳು ಮತ್ತು ಶಾಲೆಗಳ ಸಮೀಕ್ಷೆಗೆ ಆದೇಶಿಸಲಾಗಿದೆ. ಅವುಗಳನ್ನು ಮತ್ತೆ ತೆರೆಯುತ್ತೇವೆ. ಕಾಶ್ಮೀರದಲ್ಲಿ ಚಿತ್ರಮಂದಿರಗಳಿಲ್ಲ. ಹಾಗಾಗಿ ಟಾಕೀಸ್ ಗಳನ್ನು ತೆರೆಯುವ ಬಗ್ಗೆಯೂ ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.