ನವದೆಹಲಿ, ಸೆ 24 (Daijiworld News/RD): ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ, ಇದೀಗ ಗುಜರಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಮೂಲಕ ಹಳೆಯ ವಾಹನಗಳ ನಿಷೇಧಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ.
ಹಳೆಯ ವಾಹನಗಳು ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀಳುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಣಯವನ್ನು ಕೈಗೊಂಡಿದ್ದು, ಈ ಕಾಯ್ದೆಯ ಪ್ರಕಾರದ 15 ವರ್ಷದ ಪೆಟ್ರೋಲ್ ಮತ್ತು 10 ವರ್ಷದ ಡೀಸೆಲ್ ವಾಹನಗಳ ಮೇಲೆ ನಿರ್ಬಂಧ ಹೇರಲಾಗುವುದು ಎನ್ನಲಾಗಿದೆ. ಅಲ್ಲದೆ ಮರು ನೋಂದಣಿ ಶುಲ್ಕವನ್ನು ಹಲವಾರು ಹಂತಗಳಿಂದ ಹೆಚ್ಚಿಸುವ ಸಾಧ್ಯತೆ ಇದೆ. 15 ವರ್ಷಗಳಿಂದ ಚಾಲನೆಯಲ್ಲಿರುವ ವಾಹನವು ಮರು ನೋಂದಣಿಗೆ ಮಾಡಿಸಿಕೊಳ್ಳಬೇಕು ಇದಕ್ಕಾಗಿ ಖಾಸಗಿ ನಾಲ್ಕು ಚಕ್ರಗಳ ವಾಹನದ ಮರು ನೋಂದಣಿಯು ಪ್ರಸ್ತುತ 600 ರೂ.ನಿಂದ 15,000 ರೂ.ಗಳವರೆಗೆ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಈ ಗುಜರಿ ಕಾಯ್ದೆಯ ಕುರಿತಂತೆ ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ವರದಿ ಸಿದ್ದಪಡಿಸಿದ್ದು, ಈ ವರದಿಯನ್ನು ಪ್ರಧಾನಿ ಮತ್ತು ರಾಷ್ಟ್ರಪತಿಗಳ ಕಚೇರಿಗೆ ಸಲ್ಲಿಸಿದ್ದು, ಸದ್ಯಕ್ಕೀಗ ಗುಜರಿ ಕಾಯ್ದೆಗೆ ಹಣಕಾಸು ಸಚಿವಾಲಯದಿಂದ ಮಾತ್ರ ಹಸಿರು ನಿಶಾನೆ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅನುಮತಿ ನೀಡಿದ ಕೂಡಲೇ ಮುಂದಿನ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಕೇಂದ್ರ ಸರ್ಕಾರ ವಾಹನ ಚಾಲನೆ ಪರವಾನಿಗೆ ಮತ್ತು ದಾಖಲಾತಿ ಪತ್ರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಇಡೀ ದೇಶದಲ್ಲಿ ಒಂದೇ ಮಾದರಿಯ ಡಿಎಲ್ ಮತ್ತು ಆರ್ಸಿ ಪತ್ರವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಡಿಎಲ್ ಮತ್ತು ಆರ್ಸಿ ಪತ್ರವನ್ನು ಒಂದೇ ರೀತಿಯಾಗಿ ಮುದ್ರಿಸಲಾಗುವುದು. ಎರಡೂ ದಾಖಲೆಗಳಲ್ಲೂ ಮೈಕ್ರೋಚಿಪ್ ಮತ್ತು ಕ್ಯೂ ಆರ್ ಕೋಡ್ ಅಳವಡಿಸಲಾಗುವುದು. ಈಗಾಗಲೇ ರಾಜ್ಯದ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಟ್ರ್ಯಾಕಿಂಗ್ ಉಪಕರಣ ನೀಡಲಾಗಿದೆ. ಈ ಟ್ರ್ಯಾಕಿಂಗ್ ಉಪಕರಣದ ಮೂಲಕ ಪೊಲೀಸರು ಯಾವುದೇ ವಾಹನದ ಮಾಹಿತಿಯನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿತ್ತು ಕೇಂದ್ರ ಸರ್ಕಾರ. ಮುಂದಿನ ತಿಂಗಳು ಅಕ್ಟೋಬರ್ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.