ಬೆಂಗಳೂರು, ಸೆ 24 (Daijiworld News/RD): ಮೈತ್ರಿ ಸರ್ಕಾರ ಪತನವಾಗಲು ಕಾರಣ ಅನರ್ಹ ಶಾಸಕರು ಎಂಬ ಆರೋಪದ ಬಳಿಕ ಇದೀಗ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ನಡುವೆ ಇದೇ ವಿಚಾರವಾಗಿ ಗಿಳಿ ಜಗಳ ಏರ್ಪಟ್ಟಿದ್ದು, ಸಿದ್ದರಾಮಯ್ಯರಂತಹ ಅದೆಷ್ಟೋ ಗಿಳಿಗಳನ್ನು ಬೆಳೆಸಿದವರು ನಮ್ಮಪ್ಪ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ನಾನು ನಂಬಿದ ಗಿಳಿಗಳು ಹದ್ದಾಗಿ ಕಾಡಲಾರಂಭಿಸಿವೆ. ಹದ್ದನ್ನು ಗಿಳಿಯೆಂದು ನಂಬಿ ಮೈತ್ರಿ ಮಾಡಿಕೊಂಡೆವು. ಅದು ಕುಕ್ಕದೇ ಬಿಡುತ್ತದೆಯೇ ಎಂದು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದ ಸಿದ್ದರಾಮಯ್ಯ, ಇದೀಗ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ. ಕುಮಾರಸ್ವಾಮಿ, ನನ್ನನ್ನು ಈ ಜಿಲ್ಲೆಯ ಜನರು ಬೆಳೆಸಿದ್ದೇ ಹೊರತು ಸಿದ್ದರಾಮಯ್ಯನವರಲ್ಲ. ದೇವೇಗೌಡರೇ ಸಿದ್ದರಾಮಯ್ಯನವರಂತಹ ಗಿಳಿಗಳನ್ನು ಬೆಳೆಸಿದ್ದಾರೆ. ಇಂತಹ ಸಾಕಷ್ಟು ಗಿಳಿಗಳನ್ನು ದೇವೇಗೌಡರೇ ಬೆಳೆಸಿದ್ದಾರೆ. ಅವುಗಳೇ ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ.
ಇದೀಗ ಈ ಹೇಳಿಕೆಗೆ ಸರಣಿ ಟ್ವೀಟ್ ಮಾಡಿದ ಸಿದ್ದರಾಮಯ್ಯ, ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರೇ, ನೀವು ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲೂ ಎಂದಾದರೂ ಸಾಧ್ಯವೇ?ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ ಎಂದು ಹರಿಹಾಯ್ದಿದ್ದಾರೆ.
ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳನ್ನು ತೋರಿಸಿಕೊಳ್ಳದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ಇದೀಗ ಮತ್ತೆ ಸಾರ್ವಜನಿಕವಾಗಿ ಒಬ್ಬರ ಮೇಲೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.