ನವದೆಹಲಿ, ಸೆ 24 (Daijiworld News/MSP): ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿದ ನಂತರ, ಸೇನೆಯು ಈಗ ಭಾರತೀಯ ನಾಗರಿಕರಿಗಾಗಿ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್ ಪ್ರದೇಶಕ್ಕೆ ಪ್ರವೇಶ ನೀಡುವ ಬಗ್ಗೆ ಯೋಜನೆ ರೂಪಿಸುತ್ತಿದೆ.
ಈ ಬಗ್ಗೆ ಹಿರಿಯ ಲೆಫ್ಟಿನೆಂಟ್ ಜನರಲ್ಗಳು ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದ ಸೆಮಿನಾರ್ನಲ್ಲಿ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಈ ಯೋಜನೆಯನ್ನು ಇತ್ತೀಚೆಗೆ ಪ್ರಸ್ತಾಪಿಸಿದ್ದಾರೆ.
ಸೆಮಿನಾರ್ನಲ್ಲಿ, ಸೇನೆಯ ಮುಖ್ಯಸ್ಥರು, " ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿ, ಅಪಾಯಕಾರಿ ಹವಾಮಾನದಲ್ಲಿ ಭಾರತೀಯ ಸೇನೆ ಎಂತಹ ಸವಾಲನ್ನು ಮತ್ತು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ ಎಂಬುದನ್ನು ಜನಸಾಮಾನ್ಯರು ನೋಡಿ ತಿಳಿದುಕೊಳ್ಳುವಂತಾಗಬೇಕು, ಇದು ರಾಷ್ಟ್ರೀಯ ಏಕೀಕರಣಕ್ಕೆ ಒಳ್ಳೆಯದು " ಎಂದು ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
ಸಿಯಾಚಿನ್ ವಿಶ್ವದ ಅತ್ಯುನ್ನತ ಯುದ್ಧಭೂಮಿಯಾಗಿದೆ. ಇಲ್ಲಿ ವರ್ಷಪೂರ್ತಿ ಸಾವಿರಾರು ಭಾರತೀಯ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ., ಅಲ್ಲಿ ತೀವ್ರ ಶೀತ ಪರಿಸ್ಥಿತಿಗಳು ಮತ್ತು ಹಿಮಗಟ್ಟಿದ ಭೂಪ್ರದೇಶವು ಶತ್ರುಗಳ ಗುಂಡುಗಳಿಗಿಂತ ದೊಡ್ಡ ಶತ್ರುಗಳಾಗಿ ಮಾರ್ಪಡುತ್ತದೆ.
ಪಾಕಿಸ್ತಾನದಿಂದ ಸೇನೆಯ ಯೋಜನೆಗೆ ಯಾವುದೇ ವಿರೋಧವಿದೆಯೇ ಎಂದು ಪ್ರಶ್ನೆಗೆ, ಇಡೀ ಪ್ರದೇಶವು ಭಾರತಕ್ಕೆ ಸೇರಿದ್ದು ಮತ್ತು ಈ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಭಾರತೀಯ ಆಡಳಿತದ ಮೇಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಿಯಾಚಿನ್ ಗ್ಲೇಸಿಯರ್ ಪ್ರದೇಶ ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ಸಾರ್ವಜನಿಕರ ಭೇಟಿಗೆ ಸೇನೆ ಅವಕಾಶ ನೀಡುತ್ತಿರಲಿಲ್ಲವಾಗಿತ್ತು. ಇದೀಗ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಹೇಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂಬುದನ್ನು ವೀಕ್ಷಿಸಲು ಲಡಾಖ್ ನ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.