ಹುಬ್ಬಳ್ಳಿ, ಸೆ.24(Daijiworld News/SS): ಎಚ್.ಡಿ. ಕುಮಾರಸ್ವಾಮಿಯವರಿಗೆ ತಾವೇನು ಮಾತನಾಡುತ್ತಿದ್ದಾರೆ ಎಂಬ ಪ್ರಜ್ಞೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಹತ್ತಿರ ಬಂದಿದ್ದರಿಂದ ಕುಮಾರಸ್ವಾಮಿಯವರು ರಾಜಕೀಯವಾಗಿ ಮಾತನಾಡಿ ನಾಟಕವಾಡುತ್ತಿದ್ದಾರೆ. ಜೆಡಿಎಸ್ನವರು ಯಾರನ್ನು ನಿಲ್ಲಿಸುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಜನರು ಕುಟುಂಬ ರಾಜಕಾರಣದ ಬಗ್ಗೆ ಒಲವು ತೋರುವುದಿಲ್ಲ ಎಂಬುವುದು ಲೋಕಸಭಾ ಚುನಾವಣೆಯಲ್ಲೇ ಗೊತ್ತಾಗಿದೆ. ಹಾಗಾಗಿ ಈ ಬಾರಿ ಕುಟುಂಬದವರನ್ನು ನಿಲ್ಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ಹೇಳಿದರು.
ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ ಸಿದ್ದರಾಮಯ್ಯ ಅವರು, 15 ಕ್ಷೇತ್ರಗಳಲ್ಲೂ ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಸ್ವತಂತ್ರವಾಗಿಯೇ ಸ್ಪರ್ಧಿಸಿ ಗೆಲ್ಲುತ್ತೇವೆ. ಪಕ್ಷಾಂತರಿಗಳನ್ನು ಜನರು ಸಹಿಸುವುದಿಲ್ಲ. ಮತದಾರರು ಅಂತಹವರಿಗೆ ಮಣೆ ಹಾಕುವುದಿಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೇ ವೋಟು ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್.ಡಿ. ಕುಮಾರಸ್ವಾಮಿಯವರಿಗೆ ತಾವೇನು ಮಾತನಾಡುತ್ತಿದ್ದಾರೆ ಎಂಬ ಪ್ರಜ್ಞೆ ಇಲ್ಲ. ಮೈಸೂರಿನ ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿಸಿ, ಗೆಲ್ಲಿಸಿ ಎಂದು ಕುಮಾರಸ್ವಾಮಿಯವರೇ ಹೇಳಿದ್ದರು ಎಂದು ಜಿ.ಟಿ. ದೇವೇಗೌಡರು ಹೇಳಿದ್ದಾರೆ. ಜಿ.ಟಿ. ದೇವೇಗೌಡರು ಯಾವ ಪಕ್ಷ..? ಜೆಡಿಎಸ್ ಪಕ್ಷನೇ ಅಲ್ಲವಾ.? ಕಾಂಗ್ರೆಸ್ನವರಂತೂ ಅಲ್ಲ. ಜಿಟಿಡಿ ಸತ್ಯ ಹೇಳಿದರಲ್ಲ. ಈಗ ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ ಎಂದು ದೂರಿದ್ದಾರೆ.