ಮಂಡ್ಯ, ಸೆ 24 (Daijiworld News/MSP): ಹೆತ್ತ ತಾಯಿ ಮುದ್ದು ಮಗನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಅಮ್ಮನ ಪ್ರೀತಿ ಇಲ್ಲದೆ ಅಜ್ಜಿಯ ಆಸರೆಯಲ್ಲಿ ಬೆಳೆಯುತ್ತಿದ್ದ ಕಂದನ ಪಾಲಿಗೆ ಅಜ್ಜಿಯೇ ಮುಳುವಾದಳು. ಹೌದು ಇಂತದೊಂದು ಘೋರ ದುರಂತ ನಡೆದದ್ದು ಮಂಡ್ಯದ ಕೆ.ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಮಾರುತಿನಗರದಲ್ಲಿ.
ಪ್ರಿಯಕರನೊಂದಿಗೆ ಓಡಿಹೋದ ಮಗಳ ಮೇಲಿನ ಸಿಟ್ಟಿನಿಂದಾಗಿ ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮಂಡ್ಯದ ಶೀಳನೆರೆ ಹೋಬಳಿಯ ಮಾರುತಿನಗರದಲ್ಲಿ ಅಜ್ಜಿ ಸಾವಿತ್ರಮ್ಮ ಹಾಗೂ ಆಕೆಯ ಮಗಳು ಲಕ್ಷ್ಮಿ ಮತ್ತು ಲಕ್ಷ್ಮಿಯ ಹನ್ನೊಂದು ವರ್ಷದ ಪುತ್ರ ಪ್ರಜ್ವಲ್ ವಾಸವಾಗಿದ್ದರು. ಪ್ರಜ್ವಲ್ ಸನಿಹದಲ್ಲೇ ಇರುವ ಸರ್ಕಾರಿ ಶಾಲೆಯಲ್ಲಿ ಪ್ರಜ್ವಲ್ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇತ್ತೀಚಿಗೆ ತನ್ನ ಜೊತೆಯಿದ್ದ ಮಗಳು ಲಕ್ಷ್ಮಿ ಫೇಸ್ ಬುಕ್ ನಲ್ಲಿ ಪರಿಚಯವಾದ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಇದರಿಂದ ನೊಂದಿದ್ದ ಸಾವಿತ್ರಮ್ಮ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು.
ಈ ಹಿನ್ನೆಲೆಯಲ್ಲಿ ತನ್ನ ಜೊತೆ ಇದ್ದ ಮೊಮ್ಮಗ ಪ್ರಜ್ವಲ್ ನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿಕೊಂಡು ಸಮೀಪದ ಸಿಂದಘಟ್ಟ ಕೆರೆಗೆ ಮೊಮ್ಮಗನನ್ನು ತಳ್ಳಿದ್ದಾಳೆ. ಆ ಬಳಿಕ ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಲು ಸಿದ್ಧವಾಗುತ್ತಿದ್ದಾಗ ಮಾರುತಿನಗರ ನಿವಾಸಿಗಳು ಹಿಡಿದು ಕೆ.ಆರ್.ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಮಂಗಳೂರಿನಲ್ಲಿದ್ದ ಮೃತ ಬಾಲಕನ ತಾಯಿ ಲಕ್ಷ್ಮೀ ಕೆ.ಆರ್.ಪೇಟೆಗೆ ಬಂದು ತನ್ನ ಮಗನನ್ನು ನಿಷ್ಕಾರುಣವಾಗಿ ಕೊಲೆ ಮಾಡಿದ ತಾಯಿಯ ವಿರುದ್ಧ ದೂರು ನೀಡಲಿದ್ದಾರೆ.
ಮೃತ ಶಾಲಾ ವಿದ್ಯಾರ್ಥಿ ಪ್ರಜ್ವಲ್ ನ ಮೃತದೇಹದ ಪತ್ತೆಗೆ ಸಿಂದಘಟ್ಟ ಕೆರೆಯ ಬಳಿ ಶೋಧನೆ ನಡೆದಿದೆ. ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ತನಿಖೆ ಕೈಗೊಂಡಿದ್ದಾರೆ.