ಬೆಂಗಳೂರು, ಸೆ 24 (DaijiworldNews/SM): ರಾಜ್ಯದ ಅನರ್ಹ ಶಾಸಕರು ಉಪ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ನೀಡಿದೆ. ಈ ನಡುವೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವನಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಕ್ಷೇತ್ರಗಳ ಉಪ ಚುನಾವಣೆಗೆ ಅನರ್ಹ ಶಾಸಕರು ಸೇರಿದಂತೆ ಯಾರು ಬೇಕಾದರೂ ನಾಮಪತ್ರವನ್ನು ಸಲ್ಲಿಸಬಹುದು ಎಂದು ಈಗಾಗಲೇ ಸುಪ್ರೀಂಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. ಆದರೆ ಅದನ್ನು ಅಂಗೀಕಾರಗೊಳ್ಳುವುದು ಬಿಡುವುದು ಸುಪ್ರೀಂಕೋರ್ಟ್ ಗೆ ಬಿಟ್ಟ ವಿಚಾರ ಎಂಬುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅನರ್ಹರ ಸ್ಪರ್ಧೆ ಕುರಿತಾದ ವಿಚಾರ ಇದೀಗ ನ್ಯಾಯಾಲಯದಲ್ಲಿದೆ. ಈ ಕಾರಣದಿಂದಾಗಿ ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ನಡೆಸಲಾಗುವುದಿಲ್ಲ. ಒಂದೊಮ್ಮೆ ಪ್ರತಿಕ್ರಿಯೆ ನೀದಿದರೆ, ನ್ಯಾಯಾಂಗ ನಿಂದನೆಯಾಗುತ್ತದೆ ಎಂದಿದ್ದಾರೆ.
ಇನ್ನು ಅನರ್ಹರು ಸ್ಪರ್ಧಿಸಬೇಕೇ ಬೇಡವೇ? ಎಂಬ ಬಗ್ಗೆ ಕೂಲಂಕುಷ ವಿಚಾರಣೆ ನಡೆದ ಬಳಿಕ ಸುಪ್ರೀಂಕೋರ್ಟ್ ಆದೇಶ ನೀಡಲಿದ್ದು, ಎಲ್ಲರ ಕುತೂಹಲದ ಚಿತ್ತ ಅತ್ತ ನೆಟ್ಟಿದೆ.