ನವದೆಹಲಿ, ಸೆ.25(Daijiworld News/SS): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿಗೆ ಪ್ರತೀಕಾರವಾಗಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಭಾರೀ ಸಂಚು ರೂಪಿಸುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನ ಮೂಲದ ಜೈಷೆ ಮಹಮ್ಮದ್ ಉಗ್ರ ಸಂಘಟನೆ ವಿಶೇಷ ತಂಡ ಸಿದ್ಧಪಡಿಸುತ್ತಿದೆ. ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ದಾಳಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ದೋವಲ್ ಹತ್ಯೆಗೆ ಪಾಕ್ ಉಗ್ರರು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಜೈಶ್-ಎ-ಮೊಹಮ್ಮದ್ (ಜೆಎಂ) ಸಂಘಟನೆಯ ಭಯೋತ್ಪಾದಕರ ವಿರುದ್ಧ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಇದು ಜಮ್ಮು ಮತ್ತು ಕಾಶ್ಮೀರ ಮತ್ತು ಸುತ್ತಮುತ್ತಲಿನ ವಾಯುಪಡೆಯ ನೆಲೆಗಳ ವಿರುದ್ಧವೂ ಆತ್ಮಾಹುತಿ ದಾಳಿ ನಡೆಸಲು ಪ್ರಯತ್ನಿಸುತ್ತದೆ ಎಂದು ಹೇಳಿದೆ.
ಈ ಹಿನ್ನಲೆಯಲ್ಲಿ ಜಮ್ಮು, ಅಮೃತಸರ, ಪಠಾಣ್ಕೋಟ್, ಜೈಪುರ, ಗಾಂಧಿನಗರ, ಕಾನ್ಪುರ್, ಮತ್ತು ಲಖನೌ ಸೇರಿದಂತೆ ದೇಶದ 30 ಸೂಕ್ಷ್ಮ ನಗರಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.