ಬೆಳಗಾವಿ, ಸೆ 25 (Daijiworld News/MSP): ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದಲ್ಲಿ ಬಸ್ ನಿಲ್ಲಿಸಲು ಯತ್ನಿಸಿದಾಗ ವಿದ್ಯಾರ್ಥಿಗಳ ಜೀವವನ್ನು ಲೆಕ್ಕಿಸದೇ ಅವರ ಮೇಲೆಯೇ ಬಸ್ ಮುನ್ನುಗಿಸಿದ್ದ ಚಾಲಕನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.
ದಾಂಡೇಲಿ -ಹಳಿಯಾಳ -ಬೆಳಗಾವಿ ಮಾರ್ಗದ (ವಾಹನ ಸಂಖ್ಯೆ ಕೆಎ 42 ಎಫ್ 1096) ಚಾಲಕ ಎಸ್ ಎಫ್ ಶೇಖ್ ಅಮಾನತುಗೊಂಡಾತ. ವಿದ್ಯಾರ್ಥಿಗಳು ಮಂಗಳವಾರ ನಂದಗಡ ಮತ್ತು ಖಾನಾಪುರದ ವಿವಿಧ ಕಾಲೇಜುಗಳಿಗೆ ತೆರಳಲು ಬಸ್ಗಾಗಿ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ಸಂದರ್ಭ ಹಳಿಯಾಳದಿಂದ ಬೆಳಗಾವಿ ಮಾರ್ಗವಾಗಿ ಸಾಗುತ್ತಿದ್ದ ಬಸ್ಗೆ ನಿಲ್ಲಿಸುವಂತೆ ಕೈ ತೋರಿಸಿದ್ದರು.
ಈ ವೇಳೆ ಬಸ್ನ ವೇಗ ಕಡಿಮೆ ಮಾಡಿ ನಿಲ್ಲಿಸಿದಂತೆ ಮಾಡಿದ ಚಾಲಕ, ವಿದ್ಯಾರ್ಥಿಗಳು ಬಸ್ ಹತ್ತಲು ಮುಂದಾದಾಗ ಏಕಾಏಕಿ ಚಾಲನೆ ಮಾಡಿಕೊಂಡ ಹೊರಟಿದ್ದಾನೆ. ಆಗ ಓರ್ವ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದನು. ಚಾಲಕ ಯಾವುದಕ್ಕೂ ಕ್ಯಾರೆ ಮಾಡದೆ, ಬೇಜವಾಬ್ದಾರಿಯಿಂದ ಬಸ್ ಚಾಲನೆ ಮಾಡಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಈ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಚಿತ್ರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದರು. ಚಾಲಕನ ಉದ್ದಟತನ ಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರು ಸೇರಿ ಎಲ್ಲೆಡೆ ಅಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ನಿಯಮಾವಳಿ 1972ರ ಪ್ರಕಾರ ಚಾಲಕನ ನಡತೆ ಅಶಿಸ್ತು ಮತ್ತು ದಂಡನಾರ್ಹವಾಗಿತ್ತು ಎಂದು ಅಮಾನತು ಮಾಡಲಾಗಿದೆ.