ಬೆಂಗಳೂರು, ಸೆ.26(Daijiworld News/SS): ಭಾರೀ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸರಕಾರ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದ ಕರ್ನಾಟಕ ರಾಜ್ಯ, ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಸಭಾಂಗಣದಲ್ಲಿ'ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ'ಯ (ನೆರೇಡ್ಕೊ) ಕರ್ನಾಟಕದ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ 'ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಮ್ಮೇಳನ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಿಯಲ್ ಎಸ್ಟೇಟ್ ಉದ್ಯಮಿಗಳ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಅರಿವಿದ್ದು, ರಿಯಲ್ ಎಸ್ಟೇಟ್ ಯೋಜನೆಗಳಿಗೆ ಯಾವುದೇ ಅಧಿಕಾರಿಗಳು ಅಡ್ಡಿಪಡಿಸದಂತೆ ಸೂಚಿಸಲಾಗುವುದು. ಯೋಜನೆಗಳಿಗೆ ಮಂಜೂರಾತಿ ನೀಡುವಾಗ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
2022ರ ವೇಳೆಗೆ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಲು ಕೇಂದ್ರದ ಆಶಯದಂತೆ ರಾಜ್ಯದ ನಾನಾ ವಸತಿ ಯೋಜನೆಯಡಿ ಒಟ್ಟು 2,824 ಕೋಟಿ ರೂ. ವಿನಿಯೋಗಿಸಲು ಕ್ರಮ ಕೈಗೊಂಡಿದೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅತಿವೃಷ್ಟಿಯಿಂದಾಗಿ ನೂರಾರು ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸರಕಾರ ಶ್ರಮಿಸುತ್ತಿದೆ. ಸದ್ಯ ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಹೇಳಿದರು.