ಮುಂಬಯಿ, ಸೆ.26(Daijiworld News/SS): ಬ್ಯಾಂಕ್ಗಳ ವಿಲೀನದ ಬೆನ್ನಲ್ಲೇ ವಾಣಿಜ್ಯ ಬ್ಯಾಂಕ್ಗಳ ಪೈಕಿ ಕೆಲವನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ವರದಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸ್ಪಷ್ಟವಾಗಿ ತಳ್ಳಿಹಾಕಿದೆ.
'ಕೆಲವು ವಾಣಿಜ್ಯ ಬ್ಯಾಂಕುಗಳನ್ನು ಆರ್ಬಿಐ ಮುಚ್ಚುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳ ಕೆಲವು ವರ್ಗಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು' ಎಂದು ಆರ್ಬಿಐ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
9 ಬ್ಯಾಂಕ್ಗಳನ್ನು ಆರ್ಬಿಐ ಶಾಶ್ವತವಾಗಿ ಸ್ಥಗಿತಗೊಳಿಸುತ್ತಿವೆ. ಹೀಗಾಗಿ ಜನರು ಕೂಡಲೇ ಅವುಗಳಲ್ಲಿನ ತಮ್ಮ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಬ್ಯಾಂಕ್ಗಳನ್ನು ಮುಚ್ಚಲು ಆರ್ಬಿಐ ಮುಂದಾಗಿದೆ ಎಂಬದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಾಗಳನ್ನು ಹಣಕಾಸು ಸಚಿವಾಲಯ ಕೂಡ ತಳ್ಳಿಹಾಕಿದೆ.
ಈ ಕುರಿತು ಮಾತನಾಡಿರುವ ಹಣಕಾಸು ಕಾರ್ಯದರ್ಶಿ ರಾಜೀವ್ಕುಮಾರ್, ಸಾರ್ವಜನಿಕ ವಲಯದ ಯಾವುದೇ ಬ್ಯಾಂಕ್ಗಳನ್ನು ಮುಚ್ಚುವ ಪ್ರಶ್ನೆಯೇ ಉದ್ಭವಿಸಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಹಲವು ಸುಧಾರಣಾ ಕ್ರಮಗಳು ಮತ್ತು ಬಂಡವಾಳ ಹರಿಸುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.