ಲಕ್ನೋ, ಸೆ 26 (Daijiworld News/RD): ತ್ರಿವಳಿ ತಲಾಖ್ ಸಂತ್ರಸ್ತರಿಗೆ ವಾರ್ಷಿಕ 6 ಸಾವಿರ ರೂ. ಪರಿಹಾರ ಧನವನ್ನಾಗಿ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಜನವಿಕಾಸ ಕಾರ್ಯಕ್ರಮದಲ್ಲಿ ತ್ರಿವಳಿ ತಲಾಖ್ ಸಂತ್ರಸ್ತ ಮಹಿಳೆಯರೊಂದಿಗೆ ಸಂವಾದ ನಡೆಸಿದ ಸಿಎಂ ಯೋಗಿ ಆದಿತ್ಯನಾಥ, ಸಂತ್ರಸ್ತರಿಗೆ ಎಲ್ಲಾ ರೀತಿಯ ಕಾನೂನು ಸೇವೆಗಳು ಉಚಿತವಾಗಿ ಒದಗಿಸಲಾಗುತ್ತದೆ ತ್ರಿವಳಿ ತಲಾಖ್ ಸಂತ್ರಸ್ತರ ದೂರಿನ ವಿಚಾರದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳದೇ ಇದ್ದರೆ, ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ ಸುಶಿಕ್ಷಿತ ಮಹಿಳೆಯರಿಗೆ ಅವರ ಅರ್ಹತೆಗೆ ತಕ್ಕಂತೆ ಸರ್ಕಾರಿ ಉದ್ಯೋಗವನ್ನು ಕಲ್ಪಿಸಿ ಕೊಡಲಾಗುತ್ತದೆ ಮತ್ತು ಇತರ ಮಹಿಳೆಯರಿಗೆ ವಸತಿ ಹಾಗೂ ಶಿಕ್ಷಣವನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಒದಗಿಸಲಾಗುತ್ತದೆ. ಈ ಮಹಿಳೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ಅಥವಾ ಮುಖ್ಯಮಂತ್ರಿಗಳ ಆರೋಗ್ಯ ಯೋಜನೆ ಅಡಿಯಲ್ಲಿ ವಿಮೆ ಒದಗಿಸಲಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಮಹಿಳೆಯರಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸುಮಾರು 300 ಸಂತ್ರಸ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.