ಬೆಂಗಳೂರು, ಸೆ 26 (Daijiworld News/RD): ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಹಲವರ ಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಸಿಬಿಐ ಅಧಿಕಾರಿಗಳು, ಹಿಂದಿನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೈದರಾಬಾದ್ ಸಿಬಿಐ ಹಿರಿಯ ಅಧಿಕಾರಿಯ ಒಂದು ತಂಡ ಮತ್ತು ಪ್ರಕರಣದ ಐಓ ಸಿಬಿಐ ಎಸ್ ಕಿರಣ್ ಕುಮರ್ ನೇತೃತ್ವದ ಮತ್ತೊಂದು ತಂಡ ಹೀಗೆ ಹಿರಿಯ ಅಧಿಕಾರಿಗಳ ಎರಡು ತಂಡ ದಾಳಿ ನಡೆಸಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪೋನ್ ಟ್ಯಾಂಪಿಂಗ್ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿದ್ದು, ತನಿಖೆಯನ್ನು ಕೈಗೊಂಡಿರುವ ಸಿಬಿಐ ಅಧಿಕಾರಿಗಳು 47 ದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಅಲೋಕ್ ಕುಮಾರ್ ಅವರ ಮನೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೋನ್ ಕದ್ದಾಲಿಕೆ ಸಂಬಂಧಿಸಿದಂತೆ ಆಡಿಯೋ ಸೋರಿಕೆ ಮಾಡಲಾಗಿದ್ದ ಪೆನ್ ಡ್ರೈವ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಮನೆಯೊಳಗೆ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಮನೆಯಿಂದ ಯಾರನ್ನು ಹೊರಹೋಗಲು ಅವಕಾಶ ನೀಡುತ್ತಿಲ್ಲ. ಜೊತೆಗೆ ಮೊಬೈಲ್ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.
ಸಿಸಿಬಿ ಟೆಕ್ನಿಕಲ್ ಸೆಲ್ ನಿಂದ ಇನ್ ಸ್ಪೆಕ್ಟರ್ ಮಿರ್ಜಾ ಆಲಿ ಆಡಿಯೋ ಕಾಪಿ ಮಾಡಿ ಪೆನ್ ಡ್ರೈವ್ ನಲ್ಲಿ ತಂದಿದ್ದರು. ಅದನ್ನು ಕಮಿಷನರ್ ಕಚೇರಿಯಲ್ಲಿ ಅಲೋಕ್ ಕುಮರ್ ಪಡೆದುಕೊಂಡಿದ್ದರು. ಆಡಿಯೋ ಕಾಪಿ ಮಾಡಿಕೊಂಡು ವಾಪಸ್ಸು ಕೊಟ್ಟಿದ್ದಾಗಿ ಅಲೋಕ್ ಕುಮಾರ್ ಹೇಳಿದ್ದರು. ಆದರೆ ತಾನು ವಾಪಸ್ಸು ಪಡೆದಿಲ್ಲವೆಂದು ಇನ್ ಸ್ಪೆಕ್ಟರ್ ಹೇಳಿಕೆ ನೀಡಿದ್ದರು. ಹೀಗಾಗಿ ಸಿಬಿಐ ಅಧಿಕಾರಿಗಳು ಬುಧವಾರ ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದಿದ್ದರು.
ಇದೀಗ ಕಿರಣ್ ಕುಮರ್ ನೇತೃತ್ವದ ತಂಡ ಪೆನ್ ಡ್ರೈವ್ ಮತ್ತು ದಾಖಲೆಗಳ ಬಗ್ಗೆ ಹುಡುಕಾಟ ನಡೆಸಿದೆ. ಇದೇ ವೇಳೆ ಪ್ರಕರಣ ಸಂಬಂಧ ಮತ್ತೊಂದು ತಂಡ ಆಲೋಕ್ ಕುಮರ್ ಅವರನ್ನು ವಿಚಾರಣೆ ನಡೆಸುತ್ತಿದೆ.