ನವದೆಹಲಿ, ಸೆ.26(Daijiworld News/SS): ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಹೇಳಿಕೆ ನೀಡಿರುವ ಬ್ರಿಟನ್ನ ಲೇಬರ್ ಪಾರ್ಟಿಗೆ ಭಾರತ ತಿರುಗೇಟು ನೀಡಿದೆ.
ಬ್ರಿಟನ್ ಸಂಸತ್ನಲ್ಲಿ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿ ಸಂಸದ ಜೆರೇಮಿ ಕಾರ್ಬಿನ್, ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕು ಎಂಬ ನಿಲುವಳಿಯನ್ನು ಪಕ್ಷದ ಸಭೆಯಲ್ಲಿ ಮಂಡಿಸಿದ್ದರು. ಅಲ್ಲದೇ ಕಾಶ್ಮೀರಿಗಳಿಗೆ ಸ್ವಾಯತ್ತ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದ್ದರು.
ಜಮ್ಮು ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಬ್ರಿಟನ್ನ ಲೇಬರ್ ಪಾರ್ಟಿ ನೀಡಿರುವ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಲೇಬರ್ ಪಾರ್ಟಿಯ ಈ ಹೇಳಿಕೆಯ ಹಿಂದೆ ಮತ ಬ್ಯಾಂಕ್ ಹಿತಾಸಕ್ತಿ ಅಡಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಕಾಶ್ಮೀರ ಕುರಿತು ಲೇಬರ್ ಪಕ್ಷದ ಸಭೆಯಲ್ಲಿನ ವಿದ್ಯಮಾನಗಳನ್ನು ಗಮನಿಸಿದ್ದೇವೆ. ಸೂಕ್ತ ಮಾಹಿತಿ ಇಲ್ಲದೆ ಸಭೆಯಲ್ಲಿ ತೆಗೆದುಕೊಂಡಿರುವ ಆಧಾರ ರಹಿತ ನಿರ್ಧಾರಗಳ ಬಗ್ಗೆ ಬೇಸರವಿದೆ. ಖಂಡಿತವಾಗಿಯೂ ಇದು ವೋಟ್ ಬ್ಯಾಂಕ್ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಧಾರದಂತಿದೆ. ಈ ನಿರ್ಣಯ ಕುರಿತು ಲೇಬರ್ ಪಕ್ಷ ಅಥವಾ ಅದರ ಸದಸ್ಯರೊಂದಿಗೆ ಚರ್ಚಿಸುವ ಪ್ರಶ್ನೆಯೇ ಇಲ್ಲ ಎಂದು ರವೀಶ್ ಕುಮಾರ್ ಸ್ಪಷ್ಟಪಡಿಸಿದರು.