ನವದೆಹಲಿ, ಸೆ 26 (Daijiworld News/MSP): ಸ್ಪೀಕರ್ ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್ ನ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾ.ಎನ್ .ವಿ ರಮಣ್ ನೇತೃತ್ವದ ತ್ರಿಸದಸ್ಯ ಪೀಠ, 15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿ ಆದೇಶ ನೀಡಿದೆ.
ನ್ಯಾಯಾಲಯವೂ ಎರಡನೇ ದಿನವೂ ಅನರ್ಹ ಶಾಸಕರ ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ ಉಪ ಚುನಾವಣೆಗೆ ತಾತ್ಕಾಲಿಕ ತಡೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ. ಹೀಗಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಬಹುದೇ ಎಂದು ಕಾಯುತ್ತಿರುವ 17 ಅನರ್ಹ ಶಾಸಕರು ತತ್ಕಾಲಿಕವಾಗಿ ನಿರಾಳರಾಗಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವ ಮುನ್ನವೇ ಅವರನ್ನು ಶಾಸನ ಸಭೆಯಿಂದ ಅನರ್ಹಗೊಳಿಸಿದ್ದಾರೆ .ಇದು ನಿಯಮ ಬಾಹಿರ. ಹೀಗಾಗಿ ನಮಗೆ ನ್ಯಾಯ ಬೇಕು. ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ಆದೇಶಕ್ಕೆ ತಡೆ ನೀಡಿ, ಇಲ್ಲವೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಅಥವಾ ಉಪ ಚುನಾವಣೆಗೆ ತಡೆ ನೀಡುವಂತೆ ಕೋರಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಶಾಸಕರ ಅನರ್ಹತೆಯನ್ನು ಪ್ರಶ್ನಿಸಿ ಅರ್ಜಿಗಳ ವಿಚಾರಣೆ ಬಾಕಿ ಇರುವುದರಿಂದ ಕರ್ನಾಟಕದ 15 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಮುಂದೂಡಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ.