ಲಕ್ನೋ, ಸೆ 26 (Daijiworld News/RD): ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಇದೀಗ ಪೊಲೀಸರು ಹಾಕಿದ್ದ 18 ಸಾವಿರ ದಂಡವನ್ನು ಕಟ್ಟುವ ಚಿಂತೆಯಿಂದಲೇ ಆಟೋ ಚಾಲಕರೊಬ್ಬರು ತನ್ನ ಪ್ರಾಣವನ್ನು ಕಳೆದುಕೊಂಡಿದ್ದು, ಈ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ.
ಮೃತ ಕಲಿಚಾಬಾದಿನ ನಿವಾಸಿ ಗಣೇಶ್ ಅಗರ್ವಾಲ್ ಆಗಿದ್ದು, ಗಣೇಶ್ ಆಟೋ ಓಡಿಸಿಕೊಂದು ಜೀವನ ನಡೆಸುತ್ತಿದ್ದರು. ಕಳೆದ ಆಗಸ್ಟ್ 31ರಂದು ಜೌನ್ಪುರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಪೊಲೀಸರು ಗಣೇಶ್ ಅವರಿಗೆ 18 ಸಾವಿರ ರೂಪಾಯಿ ದಂಡ ಹಾಕಿದ್ದು, ಈ ದುಬಾರಿ ದಂಡವನ್ನು ಹೇಗೆ ಕಟ್ಟುವುದು ಎಂಬ ಚಿಂತೆಯಲ್ಲಿಯೇ ಅವರು ಅನಾರೋಗ್ಯಕ್ಕಿಡಾಗಿದ್ದರು.
ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಅವರ ಸ್ಥಿತಿ ಗಂಭೀರವಾದ ಬಳಿಕ ವಾರಣಾಸಿಯ ಖಾಸಗಿ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಕಾರಣಕ್ಕೆ ಸೆಪ್ಟೆಂಬರ್ 23ರಂದು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಗಣೇಶ್ ಅವರ ಸಾವಿಗೆ ಸಂಚಾರಿ ಪೊಲೀಸರು ವಿಧಿಸಿದ ಭಾರೀ ದಂಡವೇ ಕಾರಣ. ಇಷ್ಟು ಮೊತ್ತದ ದಂಡ ಕಟ್ಟಬೇಕು ಎಂದು ತಿಳಿಯದೆ ಗಣೇಶ್ ಯಾವಾಗಲೂ ಚಿಂತೆಯಲ್ಲಿಯೇ ಇರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಎಆರ್ಟಿಒ ಅಧಿಕಾರಿ ಉದಯ್ವೀರ್ ಸಿಂಗ್ ಬಳಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಗಸ್ಟ್ 31ರಂದು ಗಣೇಶ್ ಅವರನ್ನು ತಡೆದು ಪರಿಶೀಲನೆ ನಡೆಸಿದ್ದೆವು. ಆಗ ಅವರು ಆಟೋ ಪರ್ಮಿಟ್ ಹೊಂದಿರಲಿಲ್ಲ. ಹಾಗೆ ಮಾಲಿನ್ಯ ಪ್ರಮಾಣ ಪತ್ರ ಹಾಗೂ ಚಾಲನಾ ಪ್ರಮಾಣಪತ್ರ ಕೂಡ ಅವರ ಬಳಿಯಿರಲಿಲ್ಲ. ಇದಲ್ಲದೆ ಇನ್ನೂ ಮೂರು ತಪ್ಪುಗಳನ್ನು ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಎಲ್ಲಾ ಸೇರಿ ಅವರಿಗೆ 18 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು ಎಂದು ತಿಳಿಸಿದ್ದಾರೆ.