ನವದೆಹಲಿ, ಸೆ.27(Daijiworld News/SS): ಮುಂಬರುವ ಹಬ್ಬದ ಋತು ಆರ್ಥಿಕತೆಯ ಮುನ್ನಡೆಗೆ ಕಾರಣವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಆರ್ಥಿಕತೆಯ ಅಭಿವೃದ್ದಿ ವೇಗ ಸುಧಾರಣೆಯಾಗಲಿದೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಜನರ ಬಳಕೆ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಬ್ಯಾಂಕುಗಳು ಸಾಲ ನೀಡುವ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಕಾರಣ ಆರ್ಥಿಕತೆ ಸುಧಾರಣೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಪ್ರಯಾಣಿಕರ ವಾಹನ ಮಾರಾಟದಲ್ಲಿನ ಮಂದಗಿತಿಯ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್ ಇದು "ಇಮೋಷನ್" ಗೆ ಸಂಬಂಧಿಸಿದ ವಿಚಾರ. ಮುಂದಿನ ದಿನಗಳಲ್ಲಿ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಶೇಕಡಾ 5 ಕ್ಕೆ ಇಳಿದಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿನ ಕುಸಿತವು "ಆವರ್ತಕ" ಮತ್ತು ಮುಂದಿನ ಒಂದು ಅಥವಾ ಎರಡು ತ್ರೈಮಾಸಿಕಗಳಲ್ಲಿ ಮತ್ತೆ ವಾಹನ ಮಾರಾಟ ಚೇತರಿಕೆಯಾಗಲಿದೆ ಎಂದು ಖಾಸಗಿ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಿಳಿಸಿವೆ ಎಂದು ಸಚಿವರು ಹೇಳಿದರು.
ಸಾರ್ವಜನಿಕ ವಲಯದ ಬ್ಯಾಂಕರ್ಗಳನ್ನು ಭೇಟಿಯಾದ ವಾರಗಳ ನಂತರ, ಹಣಕಾಸು ಸಚಿವರು ಖಾಸಗಿ ವಲಯದ ಸಾಲದಾತರು ಮತ್ತು ಹಣಕಾಸು ಸಂಸ್ಥೆಗಳ ಪ್ರಮುಖರೊಡನೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು ನಾವು ಇಂದು ಯಾವುದೇ ಸಂಕಷ್ಟದ ಸ್ಥಿತಿ ಎದುರಿಸುತ್ತಿಲ್ಲ ಎಂದಿದ್ದಾರೆ. ಸಾಲಗಳಿಗೆ ಸಾಕಷ್ಟು ಬೇಡಿಕೆ ಇದೆ. ಲಿಕ್ವಿಡಿಟಿ ಸಮಸ್ಯೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.