ಅಹಮದಾಬಾದ್, ಸೆ.27(Daijiworld News/SS): ಕುತೂಹಲಕ್ಕೆ ಕಾರಣವಾಗಿದ್ದ ಚಂದ್ರಯಾನ-2 ಯೋಜನೆ ಅಂತಿಮ ಘಟ್ಟದಲ್ಲಿ ಎಡವಿತ್ತು. ಚಂದ್ರನ ಅಂಗಳಕ್ಕೆ ಇಳಿಯುವ ಕೆಲ ಕ್ಷಣಗಳ ಮೊದಲ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಇದೀಗ ಚಂದ್ರಯಾನ-2 ಕೊನೆಯ ಗಳಿಗೆಯಲ್ಲಿ ವಿಕ್ರಮ್ ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್ ಸಮಸ್ಯೆ ಯಾಕಾಯಿತು ಎನ್ನುವುದರ ಕುರಿತಾಗಿ ವಿಸ್ತೃತ ಅಧ್ಯಯನ ನಡೆಸಲು ರಾಷ್ಟ್ರ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಈ ಕುರಿತು ಮಾತನಾಡಿರುವ ಇಸ್ರೊ ಮುಖ್ಯಸ್ಥ ಕೆ. ಶಿವನ್, ಚಂದ್ರಯಾನ-2ರಲ್ಲಿದ್ದ ಆರ್ಬಿಟರ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ, ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆ. ಈ ಬಗ್ಗೆ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ ಬಳಿಕವೇ ಭವಿಷ್ಯದ ಚಂದ್ರಯಾನದ ಬಗ್ಗೆ ಸಿದ್ಧತೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ಚಂದ್ರಯಾನಕ್ಕೆ ಅನುಮತಿ ಪಡೆಯಲು ಸಾಕಷ್ಟು ಪ್ರಕ್ರಿಯೆಗಳು ಇರುತ್ತವೆ. ಅದೆಲ್ಲವನ್ನೂ ಪಡೆದ ಬಳಿಕ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
2022ಕ್ಕೆ ನಿಗದಿಯಾಗಿರುವ ಗಗನಯಾನದಲ್ಲಿ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲಾಗುವುದು. ಮಾನವ ಸಹಿತ ಗಗನಯಾನ ಇಸ್ರೊ ಪಾಲಿಗೆ ಅತ್ಯಂತ ಮಹತ್ವದ ಕಾರ್ಯಾಚರಣೆಯಾಗಿದ್ದು, ಅದಕ್ಕಾಗಿ ಕಠಿಣ ಪರಿಶ್ರಮ ಪಡಲಾಗುತ್ತಿದೆ ಎಂದು ತಿಳಿಸಿದರು.