ಬೆಂಗಳೂರು, ಸೆ 27 (Daijiworld News/RD): ದಸರಾ ಹಬ್ಬದ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಇಲಾಖೆ (ಎಸ್ಡಬ್ಲ್ಯೂಆರ್) ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದ್ದು, ಮಂಗಳೂರಿಗೆ ಹಾಗೂ ಬೆಳಗಾವಿಗೆ 'ಸುವಿಧಾ' ಹೆಸರಿನ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದೆ.
’ಸುವಿಧಾ’ ಸ್ಪೆಷಲ್ ಹೆಸರಿನ ರೈಲು ಸಂಖ್ಯೆ 82655 ಮತ್ತು 82656, ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸಲಿದೆ. 82655 ಸಂಖ್ಯೆಯ ರೈಲು ಅಕ್ಟೋಬರ್ 4ರಂದು ರಾತ್ರಿ 10.20ಕ್ಕೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟು ಮರುದಿನ ಮುಂಜಾನೆ 8.30ಕ್ಕೆ ಮಂಗಳೂರು ನಿಲ್ದಾಣ ತಲುಪಲಿದೆ. ಶ್ರವಣಬೆಳಗೋಳ ಮತ್ತು ಹಾಸನ ಮಾರ್ಗವಾಗಿ ಸಂಚರಿಸಲಿರುವ ಈ ರೈಲು, ಒಂದು 3 ಟೈರ್ ಎಸಿ ಕೋಚ್, 12 ದ್ವೀತಿಯ ದರ್ಜೆಯ ಸ್ಲೀಪರ್ ಕೋಚ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್ ವ್ಯವಸ್ಥೆ ಹೊಂದಿದೆ.
ಇನ್ನೂ ರಾಜಧಾನಿ ಬೆಂಗಳೂರಿನಿಂದ ಬೆಳಗಾವಿಗೆ ಸುವಿಧಾ ಸ್ಪೇಷಲ್ ಹೆಸರಿನ ರೈಲು ಸಂಖ್ಯೆ 82567 ಮತ್ತು 82658 ಸಂಚಾರ ನಡೆಸಲಿದ್ದು, 82567 ಸಂಖ್ಯೆಯ ರೈಲು ಅಕ್ಟೋಬರ್ 4ರಂದು ರಾತ್ರಿ 11 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 11.15ಕ್ಕೆ ಬೆಳಗಾವಿ ತಲುಪಲಿದೆ. ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಸಂಚರಿಸಲಿರುವ ಈ ರೈಲು, ಒಂದು 2 ಟೈರ್ ಎಸಿ ಕೋಚ್, ಎರಡು 3 ಟೈರ್ ಎಸಿ ಕೋಚ್, 16 ದ್ವೀತಿಯ ದರ್ಜೆಯ ಸ್ಲೀಪರ್ ಕೋಚ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್ ವ್ಯವಸ್ಥೆ ಹೊಂದಿದೆ.