ಬೆಂಗಳೂರು, ಸೆ 27 (Daijiworld News/RD): ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಯೋಗ್ಯ, ಅವನು ಸರಿಯಿದ್ದಿದ್ದರೆ ನಾವು ಪಕ್ಷ ಬಿಡುತ್ತಿರಲಿಲ್ಲ, ಅವನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚೇಲಾ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಗುಡುಗಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವರಿಗೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ಅವನು ಸರಿಯಿದ್ದಿದ್ದರೆ ನಾವು ರಾಜೀನಾಮೆ ಕೊಡುತ್ತಿರಲಿಲ್ಲ, ದಿನೇಶ್ ಗುಂಡುರಾವ್ ನನ್ನ ಜೊತೆಯಲ್ಲಿ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಿದ್ದ, ಬಳಿಕ ಅವರ ಅಪ್ಪ ಮುಖ್ಯಮಂತ್ರಿ ಆಗಿದ್ದರು ಹಾಗಾಗಿ ಅವನು ಇಷ್ಟು ಮೇಲೆ ಬಂದ ಎಂದು ಹರಿಹಾಯ್ದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಯಪ್ಪ ಅವರನ್ನು ಸೋಲಿಸುವ ಮೂಲಕ ಅವರಿಗೆ ಅವಮಾನ ಮಾಡಿದರು. ಇಷ್ಟೆಲ್ಲಾ ಅವಮನ ಮಾಡಿದರೂ ಅವರ ಮೇಲೆ ಏನೂ ಕ್ರಮ ಕೈಗೊಂಡಿಲ್ಲ. ಅವನು ನಮ್ಮ ತಂಟೆಗೆ ಬರೋದು ಬೇಡ. ಕೆಲಸ ಮಾಡಲು ಯೋಗ್ಯತೆಯಿಲ್ಲದ ನೀನು, ಅನರ್ಹರ ಬಗ್ಗೆ ಮಾತನಾಡುತ್ತೀಯಾ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.