ಬೆಂಗಳೂರು, ಸೆ.27(Daijiworld News/SS): ರಾಜ್ಯದ್ದು ಬರೀ ತುಘಲಕ್ ಸರ್ಕಾರ ಮಾತ್ರವಲ್ಲ. ಈ ಸರ್ಕಾರಕ್ಕೆ ಕಣ್ಣು ಕಿವಿ ಯಾವುದೂ ಇಲ್ಲ. ನೆರೆ ಬಂದು ಒಂದು ತಿಂಗಳಾದರೂ ನಿರಾಶ್ರಿತರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸಲೂ ಸಾಧ್ಯವಾಗಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರೇ, ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಗಟ್ಟಿಯಾಗಿ ಮಾತನಾಡುವ ಧೈರ್ಯ ನಿಮಗೆ ಹಾಗೂ ನಿಮ್ಮದೇ ಪಕ್ಷದ 25 ಸಂಸದರಿಗೆ ಇಲ್ಲ ಎಂದಾದರೆ ಹೇಳಿ ನಾವೂ ನಿಮ್ಮ ಜತೆ ದೆಹಲಿಗೆ ಬರುತ್ತೇವೆ. ಸರ್ವ ಪಕ್ಷಗಳ ನಿಯೋಗದ ಜತೆ ಪ್ರಧಾನಿಯವರನ್ನು ಭೇಟಿಯಾಗೋಣ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಾರಿ ಕರ್ನಾಟಕದಲ್ಲಿ ಪ್ರವಾಹದ ಆರ್ಭಟ ಹೆಚ್ಚಾಗಿ ವಿಪರೀತ ಹಾನಿಯಾಗಿದೆ. ಅದೆಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಬೆಳೆ ಹಾನಿಯಾಗಿದೆ. ಉತ್ತರ ಕರ್ನಾಟಕವಂತೂ ಮುಳುಗಿಯೇ ಹೋಗಿತ್ತು. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರವೆಂದು 2 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೂ ಕೇಂದ್ರ ಸರ್ಕಾರದ ಪರಿಹಾರ ಧನ ಇನ್ನೂ ಬಂದಿಲ್ಲ. ಕೇಂದ್ರದಿಂದ ಪರಿಹಾರ ಹಣ ತರಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.