ಬೆಂಗಳೂರು, ಸೆ.28(Daijiworld News/SS): ಅನರ್ಹ ಶಾಸಕರಿಗೆ ಮೀಸಲಿಡಲಾಗಿದ್ದ 14 ಖಾತೆಗಳನ್ನು ಹಾಲಿ ಸಚಿವರಿಗೆ ಮರು ಹಂಚಿಕೆ ಮಾಡಲಾಗಿದೆ. ಖಾತೆ ಮರು ಹಂಚಿಕೆ ಕುರಿತಂತೆ ರಾಜ್ಯಪತ್ರ ಹೊರಡಿಸಲಾಗಿದೆ.
ಅನರ್ಹ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಬಳಿ ಕಾಯ್ದಿಟ್ಟುಕೊಂಡಿದ್ದ ಖಾತೆಗಳನ್ನು ಕೊನೆಗೂ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಕೆಲ ಖಾತೆಗಳ ಹೊಣೆಯನ್ನು ಹಂಚಿಕೆ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಸಂಪುಟದ 17 ಸಚಿವರಿಗೆ ಕಳೆದ ಆ.26 ರಂದು ಖಾತೆಗಳನ್ನು ಹಂಚಿಕೆ ಮಾಡಲಾಗಿತ್ತು. 13 ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ಖಾತೆಗಳ ಜತೆಗೆ ಹೆಚ್ಚುವರಿ ಖಾತೆಗಳನ್ನು ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.
ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ – ವೈದ್ಯಕೀಯ ಶಿಕ್ಷಣ, ಲಕ್ಷ್ಮಣ ಸವದಿ – ಕೃಷಿ, ಬಸವರಾಜ ಬೊಮ್ಮಾಯಿ – ಅವರಿಗೆ ಸಹಕಾರ ಖಾತೆಗಳ ಹೊಣೆ ನೀಡಿಲಾಗಿದೆ.
ಸಚಿವರಾದ ಕೆ.ಎಸ್.ಈಶ್ವರಪ್ಪ- ಯುವಜನ ಸೇವೆ, ಕ್ರೀಡೆ, ಆರ್. ಅಶೋಕ್ – ಪುರಸಭೆ, ಪಾಲಿಕೆ, ಸ್ಥಳೀಯ ಸಂಸ್ಥೆಗಳು (ಬೆಂಗಳೂರು ಹೊರತು ಪಡಿಸಿ), ಜಗದೀಶ್ ಶೆಟ್ಟರ್ – ಸಾರ್ವಜನಿಕ ಉದ್ಯಮ, ಶ್ರೀರಾಮುಲು – ಹಿಂದುಳಿದ ವರ್ಗ ಇಲಾಖೆ, ಸುರೇಶ್ ಕುಮಾರ್ – ಕಾರ್ಮಿಕ ಇಲಾಖೆ, ಸಿಟಿ ರವಿ – ಸಕ್ಕರೆ, ವಿ.ಸೋಮಣ್ಣ – ತೋಟಗಾರಿಕೆ ಮತ್ತು ರೇಷ್ಮೆ, ಸಿಸಿ ಪಾಟೀಲ್ – ಅರಣ್ಯ ಭೂವಿಜ್ಞಾನ ಮತ್ತು ಪರಿಸರ, ನಾಗೇಶ್ – ಸ್ಕಿಲ್ ಡೆವಲಪ್ಮೆಂಟ್, ಪ್ರಭು ಚೌಹಾಣ್ – ಅಲ್ಪಸಂಖ್ಯಾತ ಅಭಿವೃದ್ಧಿ ಮತ್ತು ಹಜ್ -ವಕ್ಫ್, ಶಶಿಕಲಾ ಜೊಲ್ಲೆ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಹೊಣೆ ಲಭಿಸಿದೆ.