ಬೆಂಗಳೂರು, ಸೆ.28(Daijiworld News/SS): ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಮೊದಲು ತರಾತುರಿಯಲ್ಲಿ ಚುನಾವಣೆ ಮುಂದೂಡಿ, ಮತ್ತೆ ದಿನಾಂಕ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ಆದರೆ ಆಯೋಗದ ನಡೆ ಮಾತ್ರ ಸಹಜವಾಗಿಯೇ ಅನುಮಾನ ಮೂಡುವಂತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಚುನಾವಣಾ ಆಯೋಗವು ಉಪ ಚುನಾವಣೆಗೆ ಹೊಸ ದಿನಾಂಕ ನಿಗದಿ ಮಾಡಿ ಶುಕ್ರವಾರ ಮತ್ತೆ ಪ್ರಕಟಣೆ ನೀಡಿದೆ. ಉಪ ಚುನಾವಣೆ ಮುಂದೂಡುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದ ಮರುದಿನವೇ ದಿನಾಂಕ ಘೋಷಣೆ ಮಾಡಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುವುದರಿಂದ ಅದು ಇತ್ಯರ್ಥ ಆಗುವವರೆಗೂ ಚುನಾವಣಾ ಆಯೋಗ ಉಪ ಚುನಾವಣೆಯನ್ನು ಘೋಷಿಸುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಆಯೋಗದ ದಿಢೀರ್ ನಿರ್ಧಾರ ರಾಜ್ಯದ ರಾಜಕೀಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.