ಬೆಂಗಳೂರು, ಸೆ.28(Daijiworld News/S): ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ಚುನಾವಣಾ ಪ್ರಕ್ರಿಯೆ ಬಗ್ಗೆ ಆಯೋಗಕ್ಕೇ ಸ್ಪಷ್ಟತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ 15 ಕ್ಷೇತ್ರಗಳಿಗೆ ಮತ್ತೆ ಚುನಾವಣೆ ಘೋಷಣೆಯಾಗಿದೆ. ಆದರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಆಯೋಗಕ್ಕೇ ಸ್ಪಷ್ಟತೆ ಇಲ್ಲ. ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ನೀತಿ ಸಂಹಿತೆ ಇಲ್ಲದೇ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ...? ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ...? ಎಂದು ಕಿಡಿಕಾರಿದ್ದಾರೆ.
ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯನಿರ್ವಹಿಸುವುದರ ಹಿಂದಿನ ಅರ್ಥವೇನು..? ಇಂಥ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ. ಒಂದು ಆಪರೇಷನ್ ಕಮಲ, ಜನಮನ್ನಣೆಯನ್ನು ಮಾರಿಕೊಳ್ಳುವ ಜನಪ್ರತಿನಿಧಿಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೆಲ್ಲ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಆಯೋಗದ ನಡೆಯನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ.
ಚುನಾವಣಾ ಆಯೋಗವು ಉಪ ಚುನಾವಣೆಗೆ ಹೊಸ ದಿನಾಂಕ ನಿಗದಿ ಮಾಡಿ ಶುಕ್ರವಾರ ಮತ್ತೆ ಪ್ರಕಟಣೆ ನೀಡಿದೆ. ಉಪ ಚುನಾವಣೆ ಮುಂದೂಡುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದ ಮರುದಿನವೇ ದಿನಾಂಕ ಘೋಷಣೆ ಮಾಡಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುವುದರಿಂದ ಅದು ಇತ್ಯರ್ಥ ಆಗುವವರೆಗೂ ಚುನಾವಣಾ ಆಯೋಗ ಉಪ ಚುನಾವಣೆಯನ್ನು ಘೋಷಿಸುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಆಯೋಗದ ದಿಢೀರ್ ನಿರ್ಧಾರ ರಾಜ್ಯದ ರಾಜಕೀಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.