ನವದೆಹಲಿ, ಸೆ.28(Daijiworld News/SS): ಪಾಕಿಸ್ತಾನ ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರನ್ನು ನಿಯೋಜಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆ, ಭಾರತೀಯ ಭದ್ರತಾ ಪಡೆಗಳು ಗಡಿ ನಿಯಂತ್ರಣಾ ರೇಖೆಯುದ್ಧಕ್ಕೂ ಹೆಚ್ಚಿನ ನಿಗಾ ಇರಿಸಿವೆ.
ವಿಶ್ವಸಂಸ್ಥೆ ಮಹಾಧಿವೇಶನ ಅಂತ್ಯವಾಗುತ್ತಿದ್ದಂತೆಯೇ ತನ್ನ ನಾಗರಿಕರನ್ನು ಬಳಸಿಕೊಂಡು ಭಾರತದ ಗಡಿ ಭಾಗದಲ್ಲಿ ಹಿಂಸಾಕೃತ್ಯ ನಡೆಸಲು ಪಾಕಿಸ್ತಾನ ಯೋಜನೆ ರೂಪಿಸಿದೆ. ಭಾರತೀಯ ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಪಾಕ್ ಸೇನೆ ಮತ್ತು ಉಗ್ರ ಹಫೀಜ್ ಸಯೀದ್ನ ನೂತನ ಸಂಘಟನೆ ಜಮಾತ್ ಯಲ್ ಎಲ್ ಹಾದಿಸ್, ರಾವಲ್ಪಿಂಡಿಯಲ್ಲಿ 3 ಸಾವಿರಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿದೆ. ಅಕ್ಟೋಬರ್ ಮೊದಲ ವಾರದಲ್ಲೇ ಇವರು ಭಾರತದ ಗಡಿಯುದ್ದಕ್ಕೂ ವಿವಿಧ ಉಗ್ರ ಕೃತ್ಯಗಳನ್ನು ನಡೆಸಲಿದ್ದಾರೆ ಎನ್ನಲಾಗಿದೆ.
ಬರುವ ತಿಂಗಳ ಮೊದಲ ವಾರದಲ್ಲಿ ಈ ಯುವಕರನ್ನು ಗಡಿ ಭಾಗಕ್ಕೆ ಕಳುಹಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದ್ದು, ಭಾರತೀಯ ಭದ್ರತಾಪಡೆಗಳು ಇವರನ್ನು ಗುರಿಯಾಗಿಸಿ ದಾಳಿ ನಡೆಸಲಿ ಎನ್ನುವ ಉದ್ದೇಶದಿಂದಲೇ ಯೋಜನೆ ರೂಪಿಸಲಾಗಿದೆ. ಗಡಿ ನುಸುಳಲು ಯತ್ನಿಸುವ ಯುವಕರು ಭಯೋತ್ಪಾದನೆ ಹಿನ್ನೆಲೆ ಹೊಂದಿಲ್ಲದವರು. ಇವರನ್ನು ಗುರಿಯಾಗಿಸಿ ದಾಳಿ ನಡೆಸಿದರೆ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕು ಉಲ್ಲಂಘನೆ ವಿಚಾರದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಾಗುತ್ತದೆ ಎನ್ನುವುದು ಪಾಕಿಸ್ತಾನದ ಲೆಕ್ಕಾಚಾರ ಎಂದು ತಿಳಿದುಬಂದಿದೆ.