ಬೆಂಗಳೂರು, ಸೆ 28 (Daijiworld News/RD): ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾದ ಬಳಿಕ ಮುಂದೂಡಿದ್ದ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮತ್ತೆ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 30 ರಿಂದ ಪುನರಾರಂಭವಾಗಲಿದೆ ಎಂದು ಆದೇಶ ಸೂಚಿಸಿದೆ.
ಈ ಮೊದಲು ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿದಾಗ ಶಿಕ್ಷಕರ ವರ್ಗಾವಣೆ ಚಾಲ್ತಿಯಲ್ಲಿತ್ತು, ನೀತಿ ಸಂಹಿತೆ ಅಡ್ಡಿಪಡಿಸಿದ್ದರಿಂದ ಶಿಕ್ಷಕರ ವರ್ಗಾವಣೆ ಮುಂದೂಡಲಾಗಿತ್ತು. ಇದೀಗ ಉಪಚುನಾವಣೆ ದಿನಾಂಕ ಮತ್ತೆ ಮರುನಿಗದಿಯಾಗಿದ್ದು, ಚುನಾವಣೆಗೆ ಇನ್ನೂ ಎರಡು ತಿಂಗಳು ಕಾಲಾವಕಾಶ ಇರುವ ಕಾರಣ ಈ ಮಧ್ಯೆಯೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಈ ಬಾರಿ ಸುಮಾರು ಪ್ರಾಥಮಿಕ ಶಾಲೆಯ 13 ಸಾವಿರ ಮತ್ತು ಪ್ರೌಢಶಾಲೆಯ 3 ಸಾವಿರ ಸೇರಿದಂತೆ ಸುಮಾರು 16 ಸಾವಿರ ಶಿಕ್ಷಕರು ವರ್ಗಾವಣೆಗೊಳ್ಳುತ್ತಿದ್ದು, ಎರಡೂ ವಿಭಾಗಗಳ ಅಂತರ ಘಟಕ ವರ್ಗಾವಣೆ ಇದೀಗ ಪ್ರಗತಿಯಲ್ಲಿದೆ. ಸೋಮವಾರದಿಂದ ಪರಿಷ್ಕೃತ ವೇಳಾಪಟ್ಟಿಯಂತೆ ವರ್ಗಾವಣೆ ಕೌನ್ಸಲಿಂಗ್ ನಡೆಯಲಿದೆ. http://www.schooleducation.kar.nic.in ವೆಬ್ಸೈಟ್ನಲ್ಲಿ ಶುಕ್ರವಾರ ರಾತ್ರಿ ಪರಿಷ್ಕೃತ ವೇಳಾಪಟ್ಟಿಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಶಿಕ್ಷಕರು ಇದರ ಅನುಸಾರ ಸೋಮವಾರ ಕೌನ್ಸಲಿಂಗ್ಗೆ ಹಾಜರಾಗಬೇಕಿದೆ. ಪ್ರತಿದಿನ ಸುಮಾರು 300 ಶಿಕ್ಷಕರು ಕೌನ್ಸಲಿಂಗ್ಗೆ ಹಾಜರಾಗಲಿದ್ದಾರೆ. ಹಾಗಾಗಿ ಈ ಪ್ರಕ್ರಿಯೆ ದೀರ್ಘವಾಗಿ ನಡೆಯಲಿದ್ದು ಅಕ್ಟೋಬರ್ 30 ರ ವೇಳೆಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.