ನವದೆಹಲಿ, ಸೆ.28(Daijiworld News/SS): ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಶುಕ್ರವಾರ ತಮ್ಮ ತಾಯಿಯ ಕೊನೇ ಆಸೆಯೊಂದನ್ನು ಈಡೇರಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರ ಆಸೆಯಂತೆಯೇ ಮಗಳು ಬಾನ್ಸುರಿ, ಹರೀಶ್ ಸಾಳ್ವೆ ಅವರನ್ನು ಭೇಟಿಯಾಗಿ ತಮ್ಮ ತಾಯಿ ಹೇಳಿದ್ದಂತೆ ಒಂದು ರೂಪಾಯಿ ಶುಲ್ಕನ್ನು ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದ ಸಾಳ್ವೆಗೆ 1. ರೂ. ಗೌರವ ಸಂಭಾವನೆಯನ್ನು ಬಾನ್ಸುರಿ ನೀಡಿದ್ದಾರೆ. ಈ ಮೂಲಕ ಸುಷ್ಮಾ ನೀಡಿದ್ದ ಮಾತನ್ನು ಅವರು ನೆರವೇರಿಸಿದ್ದಾರೆ.
ಜಾಧವ್ ಅವರಿಗೆ ಪಾಕ್ ಕೋರ್ಟ್ ನೀಡಿದ್ದ ಮರಣದಂಡನೆ ಪ್ರಶ್ನಿಸಿ ವಕಾಲತ್ತು ವಹಿಸಿದ್ದ ಸಾಳ್ವೆ ಅವರು ಇದಕ್ಕಾಗಿ 1. ರೂ. ಸಂಭಾವನೆ ಮಾತ್ರ ಪಡೆಯುವುದಾಗಿ ಹೇಳಿದ್ದರು. ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ರಕ್ಷಣೆಗೆ ಪಣ ತೊಟ್ಟಿರುವ ಹರೀಶ್ ಸಾಳ್ವೆ ಅವರಿಗೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೊನೆಯುಸಿರೆಳೆಯುವ 1 ಗಂಟೆ ಮೊದಲು ಕರೆ ಮಾಡಿ, ಜಾಧವ್ ಕೇಸಿನ 1 ರೂ. ಫೀಸನ್ನು ಪಡೆಯುವಂತೆ ವಿನಂತಿಸಿದ್ದರು. ಆದರೆ ಇದಾಗಿ ಒಂದು ಗಂಟೆಯಲ್ಲೇ ಸುಷ್ಮಾ ಸ್ವರಾಜ್ ಇನ್ನಿಲ್ಲ ಎಂಬ ಸುದ್ದಿ ಅವರನ್ನು ತಲುಪಿತ್ತು.
ಇದೀಗ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ನೀಡಿದ್ದ ವಾಗ್ದಾನವನ್ನು ಸುಷ್ಮಾ ಮಗಳು ಬಾನ್ಸುರಿ ನೆರವೇರಿಸಿದ್ದಾರೆ.