ಮುಂಬೈ, ಸೆ 28 (Daijiworld News/RD): ಭಾರತೀಯ ನೌಕಾ ಪಡೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಹಾಗೂ ಸಮುದ್ರದಲ್ಲಿ ಶತ್ರಗಳ ಹೆಡೆಮುರಿಕಟ್ಟಲು, ಬಹು ನಿರೀಕ್ಷಿತ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆ ಐಎನ್ಎಸ್ ಖಂಡೇರಿಯು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.
ಖಂಡೇರಿ ಎನ್ನುವುದು ಸಮುದ್ರದ ಬಲಿಷ್ಠ ಮೀನಿನ ಹೆಸರಾಗಿದ್ದು, ಇದು ಸಮುದ್ರದಾಳದಲ್ಲಿರುವ ತನ್ನ ಬೇಟೆಯನ್ನು ಕ್ಷಣ ಮಾತ್ರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಮೂಲಕ ಛಿದ್ರ ಮಾಡುತ್ತದೆ. ಆ ಬಲಿಷ್ಠ ಮೀನಿನಂತೆಯೇ ಐಎನ್ಎಸ್ ಖಂಡೇರಿ ಸಮುದ್ರಾದಳದಲ್ಲಿ ಭಾರತವನ್ನು ಶತ್ರಗಳಿಂದ ರಕ್ಷಣೆ ಮಾಡಲಿದೆ. ದೇಶದ ಎರಡನೇ ಸ್ಕಾರ್ಪಿಯನ್ ಶ್ರೇಣಿಯ ಅತ್ಯಾಧುನಿಕ 'ಐಎನ್ಎಸ್ ಖಂಡೇರಿ' ಜಲಾಂತರ್ಗಾಮಿಯಾಗಿದ್ದು, ಯುದ್ಧ ನೌಕೆಗಳನ್ನು ಹೊಡೆದುರುಳಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. 350 ಮೀಟರ್ ಆಳದಲ್ಲಿ 50 ದಿನಗಳ ಕಾಲ ಗಸ್ತು ತಿರುಗುವ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ನೌಕೆಯು ತೇಲುವಾಗ 1,615 ಟನ್ ಮತ್ತು ಮುಳುಗಿದಾಗ 1,775 ಟನ್ ಸ್ಥಳಾಂತರಿಸುತ್ತದೆ. ದಾಳಿಯ ಜಲಾಂತರ್ಗಾಮಿ ನೌಕೆ 37 ಕಿಮೀ ಪ್ರತಿ ಗಂಟೆ ವೇಗದಲ್ಲಿ ಸಾಗರದಡಿಯಲ್ಲಿ ಚಲಿಸಬಹುದಾಗಿದ್ದು, ಮೇಲ್ಮೈಯಲ್ಲಿ ಅದರ ವೇಗವು 20 ಕಿಮೀ ಪ್ರತಿ ಗಂಟೆ ಇರಲಿದೆ.
ಸಾಮಾನ್ಯವಾಗಿ ಜಲಾಂತರ್ಗಾಮಿಗಳ ಶಬ್ಧಗಳ ಆಧಾರದ ಮೇಲೆ ನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತವೆ. ಆದರೆ ಐಎನ್ಎಸ್ ಖಂಡೇರಿ ಶಬ್ದ ರಹಿತ ಜಲಾಂತರ್ಗಾಮಿ ನೌಕೆಯಾಗಿದೆ. ಹೀಗಾಗಿ ಈ ಜಲಾಂತಗಾರ್ಮಿ ನೌಕೆಯು ಸುಲಭದಲ್ಲಿ ಶತ್ರುಪಾಳದ ನೌಕೆಗಳ ಗುರಿಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಫ್ರಾನ್ಸ್ ಜತೆಗೆ 2005ರಲ್ಲಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದದಡಿ 6 ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿಗಳ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಖಂಡೇರಿ ಜಲಾಂತರ್ಗಾಮಿ ಕೂಡ ಒಂದು. ಇದು ಮುಂಬೈನ ಮಡಗಾವ್ ಡಾಕ್ ಯಾರ್ಡ್ ನಲ್ಲಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ. ಒಟ್ಟು 25,000 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 6 ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನಿರ್ಮಿಸುವ ಯೋಜನೆ ಇದಾಗಿದೆ.