ಮುಂಬೈ, ಸೆ.28(Daijiworld News/SS): ಶತ್ರುರಾಷ್ಟ್ರಗಳ ಯಾವುದೇ ಬೆದರಿಕೆಗಳಿಗೆ ಬಲವಾದ ತಿರುಗೇಟು ನೀಡುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮುಂಬೈನ ಮಡಗಾವ್ ಡಾಕ್ ಯಾರ್ಡ್'ನಲ್ಲಿ ಐಎನ್ಎಸ್ ಖಂಡೇರಿ ಜಲಾಂತರ್ಗಾಮಿ ನೌಕೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಐಎನ್ಎಸ್ ಖಂಡೇರಿ ಸೇರ್ಪಡೆ ಮೂಲಕ ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಖಂಡೇರಿ ಎನ್ನುವುದು ಸಮುದ್ರದ ಬಲಿಷ್ಠ ಮೀನಿನ ಹೆಸರು. ಸಮುದ್ರದಾಳದಲ್ಲಿರುವ ತನ್ನ ಬೇಟೆಯನ್ನು ಕ್ಷಣ ಮಾತ್ರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಮೂಲಕ ಛಿದ್ರ ಮಾಡುತ್ತದೆ. ಆ ಬಲಿಷ್ಠ ಮೀನಿನಂತೆಯೇ ಐಎನ್ಎಸ್ ಖಂಡೇರಿ ಸಮುದ್ರಾದಳದಲ್ಲಿ ಭಾರತದ ರಕ್ಷಣೆ ಮಾಡಲಿದೆ ಎಂದು ಹೇಳಿದರು.
ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಐಎನ್ಎಸ್ ಖಂಡೇರಿ ಮತ್ತಷ್ಟು ಹೆಚ್ಚಿಸಿದೆ. ಸದಾ ಯುದ್ಧದ ಬಗ್ಗೆ ಮಾತನಾಡುವ ಪಾಕಿಸ್ತಾನ ಈ ಮೂಲಕ ತಿಳಿಯಬೇಕಾದ ವಿಚಾರವೆಂದರೆ, ಈಗ ಭಾರತ ಬದಲಾಗಿದ್ದು, ಇದು ನವಭಾರತ. ಸೇನೆಯ ಬಲವರ್ಧನೆಯಾಗಿದೆ. ನಮ್ಮ ಸರ್ಕಾರ ಸೇನಾ ಬಲವರ್ಧನೆಗೆ ಸಾಕಷ್ಟು ಒತ್ತು ನೀಡಿದೆ. ರಾಫೆಲ್ ಒಪ್ಪಂದ, ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ. ಹೀಗಾಗಿ ಶತ್ರುರಾಷ್ಟ್ರಗಳ ಯಾವುದೇ ಬೆದರಿಕೆಗಳಿಗೆ ಬಲವಾದ ತಿರುಗೇಟು ನೀಡುತ್ತೇವೆ ಎಂದು ಹೇಳಿದರು.