ಶಿವಮೊಗ್ಗ, ಸೆ 28 (Daijiworld News/RD): ಯಾವುದೇ ಪಕ್ಷಕ್ಕೆ ಸಂಘಟನೆ ಮುಖ್ಯವಾಗಿದ್ದು, ಸಂಘಟನೆ ಮೀರಿ ಬೆಳೆಯಲು ಹೋದವರಿಗೆ ತಾತ್ಕಾಲಿಕ ಯಶಸ್ಸು ಮಾತ್ರ. ಹಾಗಾಗಿ ಸಿದ್ದರಾಮಯ್ಯನವರು ತಾವೇ ಬೆಳೆದರು ವಿನಃ, ಪಕ್ಷವನ್ನು ಸಂಘಟಿಸಲೇ ಇಲ್ಲ. ಕುತಂತ್ರ ರಾಜಕಾರಣವೇ ಕಾಂಗ್ರೆಸ್ ನಿರ್ನಾಮಕ್ಕೆ ಕಾರಣವಾಗಿ ಸರಕಾರ ಉರಳಿತು ಎಂದು ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೇಸ್ ವಿರುದ್ದ ಹರಿಹಾಯ್ದಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ನ ಸಿದ್ದರಾಮಯ್ಯ ಆಗಲಿ, ಜೆಡಿಎಸ್ ನ ಕುಮಾರಸ್ವಾಮಿಯಾಗಲಿ ಅಥವಾ ಬಿಎಸ್ ಯಡಿಯೂರಪ್ಪನವರೇ ಆಗಲಿ ಪಕ್ಷದ ಬೆಂಬಲ ಇಲ್ಲದೆ, ವ್ಯಕ್ತಿಗತವಾಗಿ ಅಧಿಕಾರಕ್ಕೆ ಏರಲು ಸಾಧ್ಯವಿಲ್ಲ, ಹಾಗಾಗಿ ಪಕ್ಷದ ಬೆಂಬಲ ಮುಖ್ಯ ಎಂದು ಹೇಳಿದರು.
ನಾನೂ ಸೇರಿದಂತೆ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಯಾರೇ ಆಗಲಿ ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಒಂದು ವೇಳೆ ಪಕ್ಷ ಮೀರಿ ಬೆಳೆಯಲು ಹೋದರೆ ಅವರು ಖಂಡಿತ ನಾಶವಾಗಿ ಹೋಗುತ್ತಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.