ಬೆಂಗಳೂರು, ಸೆ.28(Daijiworld News/SS): ಕರ್ನಾಟಕವೂ ಸೇರಿದಂತೆ ದೇಶದ ನಾಲ್ಕೈದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಒಟ್ಟಿಗೆ ಪರಿಹಾರ ಘೋಷಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಲ್ಲವೇ ನಾಳೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗಲಿದೆ. ನೆರೆ ಪರಿಹಾರ ವಿಚಾರವಾಗಿ ಸಂಸದ ಪ್ರಹ್ಲಾದ್ ಜೋಷಿ ತಮ್ಮನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಕರ್ನಾಟಕವೂ ಸೇರಿದಂತೆ ದೇಶದ ನಾಲ್ಕೈದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಒಟ್ಟಿಗೆ ಪರಿಹಾರ ಘೋಷಣೆ ಮಾಡಲಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗ 15 ಕ್ಷೇತ್ರಗಳ ಉಪಚುನಾವಣೆಗೆ ಮತ್ತೆ ದಿನಾಂಕ ಘೋಷಣೆ ಮಾಡಿದೆ. ಚುನಾವಣೆ ಸಂಬಂಧ ಪಕ್ಷದ ಮುಖಂಡರ ಜೊತೆ ಚರ್ಚಿಸಲಾಗುತ್ತಿದೆ. ಪಕ್ಷ ಚುನಾವಣೆ ಎದುರಿಸಲುಸಿದ್ಧವಿದೆ ಎಂದು ತಿಳಿಸಿದರು.
ಈಗಾಗಲೇ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ವಿಜಯನಗರ ಜಿಲ್ಲಾ ರಚನೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಬಳ್ಳಾರಿ ಜಿಲ್ಲೆ ವಿಭಜನೆ ಸಂಬಂಧ ಜಿಲ್ಲೆಯ ಪಕ್ಷದ ನಾಯಕರನ್ನೆಲ್ಲ ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.