ಬೆಂಗಳೂರು, ಸೆ 28 (Daijiworld News/RD): ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ಹುಚ್ಚು ಹೆಚ್ಚಾಗಿದ್ದು, ರೈಲ್ವೆ ಟ್ರಾಕ್ ಮೇಲೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಇಬ್ಬರು ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶುಕ್ರವಾರ ಸಂಜೆ 5.30ರಿಂದ 6 ಗಂಟೆ ನಡುವೆ ಮೂವರು ಯುವಕರು ಟಿಕ್ಟಾಕ್ ವಿಡಿಯೋ ಮಾಡಲು ರೈಲ್ವೆ ಹಳಿ ಮೇಲೆ ಹೋಗಿದ್ದರು. ಹಳಿ ಮೇಲೆ ನಿಂತು, ರೈಲು ಬರುವ ಸಂದರ್ಭದಲ್ಲಿ ಹೊರಗೆ ಜಿಗಿಯಬೇಕೆಂಬ ಪ್ಲಾನ್ ಮಾಡಿದ್ದರು. ಈ ವೇಳೆ ಕೋಲಾರ-ಬೆಂಗಳೂರು ಪ್ಯಾಸೆಂಜರ್ ರೈಲು ಯಲಹಂಕ ನಿಲ್ದಾಣದಿಂದ ನಗರದ ಕಡೆ ಬರುತ್ತಿತ್ತು. ಈ ವೇಳೆ ಯುವಕರು ಹೊರಗೆ ಜಂಪ್ ಹೊಡೆಯುವಾಗ ರೈಲಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಯುವಕರು ಹಳಿಯಿಂದ ಸಾಕಷ್ಟು ದೂರಕ್ಕೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬನಿಗೆ ಗಂಭೀರ ಗಾಯಗಳಾಗಿವೆ.
ಮೃತ ಯುವಕರನ್ನು ಹೆಗಡೆ ನಗರ ನಿವಾಸಿಗಳಾಗಿದ್ದು, ಫುಡ್ ಡೆಲಿವರಿ ಕೊಡುವ ಕೆಲಸ ಮಾಡುತ್ತಿದ್ದ ಅಫ್ತಾಬ್ ಶರೀಫ್(19) ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮತೀನ್(23) ಎಂದು ಗುರುತಿಸಲಾಗಿದೆ. ಜಬೀವುಲ್ಲಾ(21) ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.