ನವದೆಹಲಿ, ಸೆ 28 (Daijiworld News/MSP): ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ರೋಹನ್ ಗುಪ್ತಾ ಅವರನ್ನು ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಶನಿವಾರ ನೇಮಕ ಮಾಡಿದ್ದಾರೆ. ಈ ಮೂಲಕ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹುದ್ದೆಯಿಂದ ಮಾಜಿ ಸಂಸದೆ ರಮ್ಯಾಗೆ 'ಅಧಿಕೃತ'ವಾಗಿ ಗೇಟ್ ಪಾಸ್ ನೀಡಲಾಗಿದೆ.
"ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, "ರೋಹನ್ ಗುಪ್ತಾ" ಅವರನ್ನು ಪಕ್ಷದ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ, ಇದು ತಕ್ಷಣದಿಂದ ಜಾರಿಗೆ ಬರುತ್ತದೆ" ಎಂದು ಪಕ್ಷವು ಶನಿವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಗುಜರಾತ್ ನವರಾಗಿರುವ ರೋಹನ್ ಗುಪ್ತಾ ಕಾಂಗ್ರೆಸ್ ನ ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ರಮ್ಯ ಬಳಿಕ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ರಾಹುಲ್ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಅವರನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ನೇಮಕಮಾಡಲಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು ಇದರಿಂದ ಎಚ್ಚೆತ ಕಾಂಗ್ರೆಸ್, ಪಕ್ಷದ ಸಾಮಾಜಿಕ ಜಾಲತಾಣ ತಂಡವನ್ನು ಬಲಪಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಮಾಜಿ ಸಂಸದೆ ರಮ್ಯಾ ಅವರನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸ್ಥಾನದಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.