ನವದೆಹಲಿ, ಸೆ 28 (Daijiworld News/MSP): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ "ರಾಷ್ಟ್ರೀಯ ಸ್ವಯಂ ಸೇವಕ ಸಂಘ"ದ ಹೆಸರು ಉಲ್ಲೇಖಿಸಿದ್ದಕ್ಕೆ, ಆರ್ಎಸ್ಎಸ್ ಧನ್ಯವಾದ ತಿಳಿಸಿದೆ. ಮಾತ್ರವಲ್ಲದೆ ’ಜಾಗತಿಕವಾಗಿ , ಆರ್ಎಸ್ಎಸ್ ಹೆಸರು ಹೇಳುವುದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇನ್ನು ಕೂಡಾ ಮುಂದುವರಿಸಲಿ ಎಂದು ಸಂಘ ಹಾರೈಸಿದೆ.
ವಿಶ್ವಸಂಸ್ಥೆಯಲ್ಲಿ ಆರ್ಎಸ್ಎಸ್ ವಿರುದ್ದ ಪಾಕ್ ಪ್ರಧಾನಿ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಸಂಘ ಪ್ರತಿಕ್ರಿಯೆ ನೀಡಿದ್ದು, " ಆರ್ಎಸ್ಎಸ್ ಹೆಸರನ್ನು ಭಾರತಕ್ಕೆ ಸಮಾನಾರ್ಥಕವನ್ನಾಗಿ ಇಮ್ರಾನ್ ಖಾನ್ ಮಾಡಿದ್ದಾರೆ. ಭಯೋತ್ಪಾದನೆಯನ್ನು ತೀವ್ರವಾಗಿ ವಿರೋಧಿಸುವ ಸಂಘವನ್ನಾಗಿ ಗುರುತಿಸಿದ್ದಾರೆ . ಹೀಗಾಗಿ ವಿಶ್ವಸಂಸ್ಥೆಯಲ್ಲಿ ಸಂಘದ ಉಲ್ಲೇಖವನ್ನು ಮಾಡುವ ಮೂಲಕ ಸಂಘದ ಹೆಸರನ್ನು ಜಾಗತಿಕವಾಗಿ ಹರಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಭಾರತದಲ್ಲಿ ಆರ್ಎಸ್ಎಸ್ ಇದೆ ಮತ್ತು ಇದು ಭಾರತಕ್ಕೆ ಮಾತ್ರ. ಇದು ಜಗತ್ತಿನ ಬೇರೆಲ್ಲಿಯೂ ಯಾವುದೇ ಶಾಖೆಯನ್ನು ಹೊಂದಿಲ್ಲ. ಪಾಕಿಸ್ತಾನ ನಮ್ಮ ಮೇಲೆ ಏಕೆ ಕೋಪಗೊಂಡಿದೆ? ಪಾಕಿಸ್ತಾನ ಸಂಘದ ಮೇಲೆ ಕೋಪಗೊಂಡರೆ, ಭಾರತದ ಮೇಲೆ ಕೋಪಗೊಂಡಿದ್ದಾರೆ ಎಂದರ್ಥ. ಆರ್ಎಸ್ಎಸ್ ಮತ್ತು ಭಾರತ ಈಗ ಸಮಾನಾರ್ಥಕಗಳಾಗಿವೆ ”ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ''ಪ್ರಧಾನಿ ನರೇಂದ್ರ ಮೋದಿ ಆರ್ಎಸ್ಎಸ್ನ ಜೀವಿತಾವಧಿ ಸದಸ್ಯರಾಗಿದ್ದಾರೆ . ಹಿಟ್ಲರ್, ಮುಸಲೋನಿಯಿಂದ ಪ್ರಚೋದನೆಗೊಂಡು ಆರ್ಎಸ್ಎಸ್ ಆರಂಭಿಸಲಾಯಿತು. ಆರ್ಎಸ್ಎಸ್ಗೆ ಭಾರತದಿಂದ ಮುಸ್ಲಿಮರನ್ನು ಹೊರಗೆ ಓಡಿಸುವುದು ಗುರಿಯಾಗಿತ್ತು. ಅವರು ಕ್ರಿಶ್ಚಿಯನ್ನರನ್ನೂ ದ್ವೇಷಿಸುತ್ತಾರೆ. ಇವೆಲ್ಲವನ್ನೂ ಗೂಗಲ್ ಮಾಡಿ ಅಂತರ್ಜಾಲದ ಮೂಲಕ ನೀವು ತಿಳಿದುಕೊಳ್ಳಬಹುದು'' ಎಂದು ಇಮ್ರಾನ್ ಖಾನ್ ಟೀಕಿಸಿದ್ದರು.