ಬೆಂಗಳೂರು, ಸೆ 28 (DaijiworldNews/SM): ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ಅನರ್ಹ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಸೇರಿದಂತೆ ರಾಜ್ಯ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಆದರೆ, ಈ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ. ಬದುಕಿನ ಕೊನೆಯ ತನಕ ನಾನು ಜನ ಪರ ಕಾರ್ಯಗಳನ್ನೇ ಮಾಡುತ್ತೇನೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರನ್ನು ಇಡಿ, ಸಿಬಿಐ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಬಿಜೆಪಿ ಪಕ್ಷದ ಯಾವುದೇ ನಾಯಕರ ಮೇಲೂ ಇಂತಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕಾಂಗ್ರೆಸ್ ನಲ್ಲಿ ಮಾತ್ರವೇ ಕಳ್ಳರಿರುವುದಾ? ಬಿಜೆಪಿಯಲ್ಲಿ ಯಾರೂ ಕಳ್ಳರೇ ಇಲ್ಲವೆ? ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದ ಬಿಜೆಪಿ ನಾಯಕರ ವಿರುದ್ಧ ಮೋದಿ ಸರ್ಕಾರ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಗಾಂಧಿ ಕುಟುಂಬವನ್ನು ಕುಟುಂಬ ರಾಜಕಾರಣದ ಹೆಸರಿನಲ್ಲಿ ಗುರುತಿಸಲಾಗುತ್ತಿದೆ. ಇದನ್ನು ಟೀಕಿಸುವವರೂ ಕೂಡ ಮಾಡಿರುವುದು ಇದನ್ನೆ. ನಾವೆಲ್ಲರೂ ಅದನ್ನೇ ಮಾಡುತ್ತಿದ್ದೇವೆ. ಆದರೆ, ಎಲ್ಲರ ಕಣ್ಣು ಮಾತ್ರ ಗಾಂಧಿ ಕುಟುಂಬದ ಮೇಲೆ ಯಾಕೆ ಎಂದು ಗೊತ್ತಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಇನ್ನು ಅನರ್ಹ ಶಾಸಕರ ವಿಚಾರ ಸುಪ್ರಿಂ ಕೋರ್ಟ್ ನಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆಗನ್ನು ನೀಡಲು ಶಾಸಕ ರಮೇಶ್ ಕುಮಾರ್ ಹಿಂದೇಟು ಹಾಕಿದರು.