ನವದೆಹಲಿ, ಸೆ 28 (DaijiworldNews/SM): ಈಗಾಗಲೇ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಸಂಚಾರಿ ನಿಯಮ ಉಲ್ಲಂಘಿಸದಿರಲು ದುಬಾರಿ ದಂಡವನ್ನು ಜಾರಿಗೆ ತರಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ನಿಯಮ ಜಾರಿಗೆ ತರಲು ಸರಕಾರ ಮುಂದಾಗಿದೆ.
ದೇಶದೆಲ್ಲೆಡೆ ಒಂದೇ ಮಾದರಿಯ ಡಿಎಲ್ ಮತ್ತು ಆರ್ಸಿ ಪತ್ರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 1ರಿಂದಲೇ ಹೊಸ ಯೋಜನೆಯನ್ನು ಸರಕಾರ ಜಾರಿಗೆ ತರಲಿದೆ. ಅಕ್ಟೋಬರ್ ಒಂದರ ಬಳಿಕ ದೇಶದೆಲ್ಲೆಡೆ ಡಿಎಲ್ ಹಾಗೂ ಆರ್ ಸಿ ಪತ್ರವನ್ನು ದೇಶದಾದ್ಯಂತ ಒಂದೇ ಮಾದರಿಯಲ್ಲಿ ಮುದ್ರಿಸಲಿದೆ.
ಈ ಹಿಂದೆ ಇದ್ದ ಹಳೆಯ ಮುದ್ರಣ ಪದ್ದತಿ, ವಿನ್ಯಾಸ, ಶೈಲಿ ಎಲ್ಲವೂ ಬದಲಾಗಲಿದೆ. ಈ ಎರಡು ದಾಖಲೆಗಳು ಮೈಕ್ರೋಚಿಪ್ ಹಾಗೂ ಕ್ಯೂ ಆರ್ ಕೋಡ್ ಅಳವಡಿಸಲಾಗುವುದು ಎಂದು ಸರಕಾರ ತಿಳಿಸಿದೆ.
ಇನ್ನು ಈಗಾಗಲೇ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ಆಗಸ್ಟ್ ತಿಂಗಳಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡ ಬಳಿಕ ದೇಶದೆಲ್ಲೆಡೆ ಜಾರಿಗೆ ಬಂದಿದೆ. ವಿಶ್ವದಲ್ಲೇ ಅಪಘಾತದಲ್ಲಿ ಸಾಯುವವರ ಸಂಖ್ಯೆ ಭಾರತದಲ್ಲಿ ಅತ್ಯಧಿಕವಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆಯಿಂದಲೇ ಬಹುತೇಕ ಅಪಘಾತಗಳು ಸಂಭವಿಸುತ್ತವೆ ಎನ್ನಲಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದುಬಾರಿ ದಂಡವನ್ನು ಜಾರಿಗೆ ತಂದಿದೆ. ಇದು ಸೆಪ್ಟೆಂಬರ್ ಎರಡರಿಂದಲೇ ದೇಶದೆಲ್ಲೆಡೆ ಜಾರಿಗೆ ಬಂದಿದೆ.