ಶ್ರೀನಗರ, ಸೆ.29(Daijiworld News/SS): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್'ಕೌಂಟರ್'ನಲ್ಲಿ ಪ್ರಮುಖ ಉಗ್ರ ಹಿಜ್ಬುಲ್ ಕಮಾಂಡರ್ ಒಸಾಮಾ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಭದ್ರತಾ ಪಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆಯಲು ಸಂಚು ರೂಪಿಸಿದ್ದ ಮೂವರು ಉಗ್ರರನ್ನು ಸೆದೆಬಡಿದಿದ್ದು, ಈ ಮೂವರು ಮೃತ ಉಗ್ರರ ಪೈಕಿ ಕಣಿವೆ ರಾಜ್ಯದ ಪ್ರಮುಖ ಉಗ್ರ ಒಸಾಮಾ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ. ಈತನ ಸಹಚರರಾದ ಜಾಹಿದ್, ಫರೂಕ್ ಎಂಬುವರನ್ನೂ ಕೂಡ ಸೇನೆ ಹತ್ಯೆಗೈದಿದೆ.
ಎನ್ ಕೌಂಟರ್ ಬಳಿಕ ಉಗ್ರರ ಗುರುತು ಪತ್ತೆ ಕಾರ್ಯ ನಡೆಸಲಾಗಿದ್ದು, ಈ ವೇಳೆ ಮೂವರು ಮೃತ ಉಗ್ರರ ಪೈಕಿ ಓರ್ವ ಉಗ್ರನನ್ನು ಒಸಾಮಾ ಎಂದು ಗುರುತಿಸಲಾಗಿದೆ. ಈತ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವನಾಗಿದ್ದು, ಈ ಹಿಂದೆ ಹಿರಿಯ ಬಿಜೆಪಿ ಮುಖಂಡ ಅನಿಲ್ ಪರಿಹಾರ್, ಅಜಿತ್ ಪರಿಹಾರ್ ಹತ್ಯೆಯ ರೂವಾರಿಯಾಗಿದ್ದ ಎಂದು ತಿಳಿದುಬಂದಿದೆ.
ಜಮ್ಮು–ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯ ಬಟೋಟೆ ಪ್ರದೇಶದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಉಗ್ರರು ಮನೆಯಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ವಿಚಾರ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಸೇನೆ ಮೂವರೂ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ವೇಳೆ ಸೇನೆಯ ಓರ್ವ ಯೋಧ ಹುತಾತ್ಮರಾಗಿ ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದರು.