ಮುಂಬೈ, ಸೆ.29(Daijiworld News/SS): ನೆರೆ ರಾಷ್ಟ್ರ ಪಾಕಿಸ್ತಾನವು ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಉಗ್ರರನ್ನು ಪೋಷಣೆ ಮಾಡಿ ಅವರನ್ನು ಭಾರತದ ವಿರುದ್ಧ ದಾಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಪಾಕಿಸ್ತಾನ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಸಮುದ್ರ ಮಾರ್ಗದಲ್ಲಿ ಈ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಭಾರತೀಯ ನೌಕಾಪಡೆ ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.
ಗುಪ್ತಚರ ಮೂಲಗಳ ಅನ್ವಯ ಸಮುದ್ರ ಮಾರ್ಗದಲ್ಲಿ ಉಗ್ರ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಮಗೆ ಲಭಿಸಿರುವ ಮಾಹಿತಿ ಪ್ರಕಾರ ನೆರೆಯ ರಾಷ್ಟ್ರದ ಸೇನೆ, ಗುಪ್ತಚರ ಇಲಾಖೆ ಉಗ್ರರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.