ನವದೆಹಲಿ, ಸೆ.29(Daijiworld News/SS): ಅಮೆರಿಕಾ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ಸಾದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನರನ್ನುದ್ದೇಶಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನಿಂದ ನವರಾತ್ರಿ ಹಬ್ಬ ಆರಂಭ, ಹಬ್ಬದ ವಾತಾವರಣ ಹೊಸ ಹುರುಪು ಮತ್ತು ಉತ್ಸಾಹಗಳಿಂದ ಕಳೆಕಟ್ಟಿದೆ, ಈ ಸಮಯದಲ್ಲಿ ನಾವು ಸಂತೋಷವನ್ನು ಸಂಭ್ರಮವನ್ನು ಪಸರಿಸಬೇಕಿದೆ. ನವರಾತ್ರಿ ಕಳೆದು ಕೆಲ ದಿನಗಳಲ್ಲಿ ದೀಪಾವಳಿ ಬರುತ್ತದೆ. ಈ ದೀಪಾವಳಿಯನ್ನು ನಾವು ಭಾರತದ ಲಕ್ಷ್ಮಿ ಎಂದು ಆಚರಿಸೋಣ. ನಾರಿಯರ ಕೌಶಲ್ಯ ಮತ್ತು ಶಕ್ತಿಯನ್ನು ಕೊಂಡಾಡೋಣ ಎಂದು ಹೇಳಿದ್ದಾರೆ.
ಅದೃಷ್ಟ ಮತ್ತು ಸಮೃದ್ಧಿ ಹೆಸರಿನಲ್ಲಿ ಲಕ್ಷ್ಮಿ ದೇವಿ ಪ್ರತಿಯೊಬ್ಬರ ಮನೆಗೆ ಕಾಲಿಡುತ್ತಾಳೆ. ಲಕ್ಷ್ಮಿ ದೇವಿಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತೇವೆ. ಮಹಿಳೆಯನ್ನು, ಮನೆಯಲ್ಲಿ ಹುಟ್ಟಿದ ಮಗಳನ್ನು ಲಕ್ಷ್ಮಿ ಎಂದು ನಮ್ಮ ಸಂಸ್ಕೃತಿಯಲ್ಲಿ ಗೌರವಿಸುತ್ತೇವೆ ಎಂದು ತಿಳಿಸಿದರು.
ಇ- ಸಿಗರೇಟ್ ನಿರುಪದ್ರವ ಎಂದು ಇಂದಿನ ಯುವಜನಾಂಗ ಭಾವಿಸಿದೆ. ತಂಬಾಕು ಉತ್ಪನ್ನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರ ವ್ಯಸನಿಯಾದರೇ ಹೊರಬರುವುದು ಬಹಳ ಕಷ್ಟ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಮುಂತಾದ ಹಲವಾರು ಕಾಯಿಲೆಗಳು ಬರುತ್ತವೆ. ತಂಬಾಕಿನಲ್ಲಿ ನಿಕೋಟಿನ್ ಅಂಶ ಹೆಚ್ಚಿರುವುದರಿಂದ ಯುವ ಜನಾಂಗದ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಜನರಲ್ಲಿ ಅರಿವಿನ ಕೊರತೆಯಿಂದ ಇ-ಸಿಗರೇಟ್ ಬಳಕೆ ಹೆಚ್ಚುತ್ತಿದೆ. ಅದನ್ನು ಕೂಡಲೇ ನಿಲ್ಲಿಸುವಂತೆ ಈ ಸಂದರ್ಭದಲ್ಲಿ ತಿಳಿಸಿದರು.