ನವದೆಹಲಿ, ಸೆ.29(Daijiworld News/SS): ನಮ್ಮ ಪರಿಸರವನ್ನು ರಕ್ಷಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಎತ್ತಿಹಿಡಿಯುವುದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಥಳೀಯ ಜನಸಮುದಾಯದ ಹಿತಾಸಕ್ತಿಯನ್ನು ಕಾಪಾಡುವತ್ತ ಗಮನಿಸಬೇಕೆಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಕೇರಳದ ವಯನಾಡು ಸಂಸದರಾಗಿರುವ ರಾಹುಲ್ ಗಾಂಧಿ ರಾಷ್ಟ್ರೀಯ ಹೆದ್ದಾರಿ ರಾತ್ರಿ ಸಂಚಾರ ನಿಷೇಧ ಖಂಡಿಸಿ ಸೆಪ್ಟೆಂಬರ್ 25 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿರುವ ಯುವಕರಿಗೆ ಬೆಂಬಲ ಸೂಚಿಸಿದ್ದಾರೆ.
ನಮ್ಮ ಪರಿಸರವನ್ನು ರಕ್ಷಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಎತ್ತಿಹಿಡಿಯುವುದರೊಂದಿಗೆ ಸ್ಥಳೀಯ ಜನಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವಂತೆ ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಬಂಡೀಪುರ ಮೀಸಲು ಅರಣ್ಯ ವ್ಯಾಪ್ತಿಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಬತ್ತು ಗಂಟೆಗಳ ಸಂಚಾರ ನಿಷೇಧವು ಕೇರಳ ಮತ್ತು ಕರ್ನಾಟಕದ ಲಕ್ಷಾಂತರ ಜನರಿಗೆ ತೊಂದರೆ ಉಂಟುಮಾಡಿದೆ. ಸೆಪ್ಟೆಂಬರ್ 25 ರಿಂದ ಎನ್ಎಚ್ -766ರಲ್ಲಿ 9 ಗಂಟೆಗಳ ಸಂಚಾರ ನಿಷೇಧವನ್ನು ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ನಾನು ಯುವಕರೊಂದಿಗೆ ನಿಲ್ಲುತ್ತೇನೆ. ಇದು ಕೇರಳ ಮತ್ತು ಕರ್ನಾಟಕದ ಲಕ್ಷಾಂತರ ಜನರಿಗೆ ಅಪಾರ ತೊಂದರೆಗಳನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಹುಲಿ ಮೀಸಲು ಅರಣ್ಯದ ಮೂಲಕ ಹಾದು ಹೋಗುವ ಹೆದ್ದಾರಿ ಸಂಚಾರವನ್ನು ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನಿಷೇಧಿಸಲಾಗಿದೆ. ಮೀಸಲು ಅರಣ್ಯದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ವನ್ಯಜೀವಿಗಳಿಗೆ ತೊಂದರೆ ಕಡಿಮೆಗೊಳಿಸುವ ಉದ್ದೇಶ ಹೊಂದಿದೆ.