ನವದೆಹಲಿ, ಸೆ 29(Daijiworld News/MSP): ಕಣಿವೆ ರಾಜ್ಯ ಕಾಶ್ಮೀರ ಕಣಿವೆಯಲ್ಲಿ ಈಗ ಯಾವುದೇ ನಿರ್ಬಂಧಗಳಿಲ್ಲ ಮತ್ತು ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಡೆಯನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.
ಆ.5 ರಂದು ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರದಿಂದ ಮುಂದಿನ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಆಯೋಜಿಸಿದ್ದ ಭದ್ರತೆ ಕುರಿತ ವಿಚಾರ ಸಂಕಿರಣದಲ್ಲಿ ಉತ್ತರ ನೀಡಿರುವ ಅಮಿತ್ ಶಾ, “ಕಾಶ್ಮೀರದಲ್ಲಿನ ನಿರ್ಬಂಧಗಳ ಬಗೆಗೆ ಪ್ರತಿಪಕ್ಷಗಳು ತಪ್ಪು ಮಾಹಿತಿ ಹರಡುತ್ತಿವೆ. ನಿಜವಾಗಿಯೂ ಜಮ್ಮು ಕಾಶ್ಮೀರದಲ್ಲಿ ನಿರ್ಬಂಧಗಳು ಈಗ ಎಲ್ಲಿವೆ? ಈ ಕುರಿತು ವಿರೋಧ ಪಕ್ಷಗಳು ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿವೆ. ಕಣಿವೆ ರಾಜ್ಯದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ನಿರ್ಬಂಧಗಳಿರುವುದು ನಿಮ್ಮ ಮನಸ್ಸಿನಲ್ಲಿ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕಾಶ್ಮೀರದ ಎಲ್ಲಾ 196 ಪೊಲೀಸ್ ಠಾಣೆಗಳಲ್ಲಿ ಕರ್ಫ್ಯೂ ತೆಗೆದುಹಾಕಲಾಗಿದೆ, ಮತ್ತು ಎಂಟು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಮಾತ್ರ ಸೆಕ್ಷನ್ 144 ಅನ್ನು ವಿಧಿಸಲಾಗಿದ್ದು, ಅಲ್ಲಿ ಐದು ಅಥವಾ ಹೆಚ್ಚಿನ ವ್ಯಕ್ತಿಗಳು ಸೇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.