ಬೆಂಗಳೂರು, ಸೆ.30(Daijiworld News/SS): ಸಮರ್ಥವಾದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು. ಈ ಮೂಲಕ ಬಿಜೆಪಿಗೆ ಸೋಲಿನ ರುಚಿ ಜನರೇ ತೋರ್ಪಡಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆ ಉಪ ಚುನಾವಣೆ ಬಳಿಕ ಬಿಜೆಪಿ ಸರಕಾರ ಪತನ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ. ಅ. 10ರೊಳಗೆ ವಿಧಾನಸಭೆ ಪ್ರತಿಪಕ್ಷ ನಾಯಕನನ್ನು ಪಕ್ಷದ ಹೈಕಮಾಂಡ್ ಘೋಷಣೆ ಮಾಡಲಿದೆ. ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಿ ಘೋಷಣೆ ಮಾಡಲಿದೆ ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಗೌಪ್ಯತೆ ಕಾಪಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಾನು ಪ್ರತಿಪಕ್ಷ ನಾಯಕ ಆಗಬೇಕು ಎಂದು ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಆದರೆ ಪಕ್ಷದ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ. ಅಭಿಮಾನಿಗಳು ಮತ್ತು ಶಾಸಕರು ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಜನರ ಆಶೀರ್ವಾದ ಇದ್ದರೆ ಆಗಬೇಕಾಗುತ್ತದೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವರು ಶಾಸಕರು ನಾನೇ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಆದರೆ ಜನ ಬೆಂಬಲ ಬೇಕಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೆರೆ ಹಾವಳಿ ಬಂದು 50 ದಿನ ಕಳೆದರೂ ಸಹ ಇನ್ನೂ ಎಲ್ಲ ಪಕ್ಷದ ಮೀಟಿಂಗ್ ಕರೆದಿಲ್ಲ. ಅಲ್ಲದೆ ಪ್ರಧಾನಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗಿಲ್ಲ. ಅವರು ರಾಜ್ಯಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. 25 ಜನ ಲೋಕಸಭೆ ಸದಸ್ಯರು ಇದ್ದಾರೆ. 3 ಜನ ಕೇಂದ್ರದ ಮಂತ್ರಿಗಳು ಇದ್ದಾರೆ. ಇವರಿಗೂ ಸಹ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವಷ್ಟು ಧೈರ್ಯವಿಲ್ಲ. ಎಲ್ಲರೂ ಬಾಲಮುದುರಿಕೊಂಡು ಸುಮ್ಮನೇ ಕುಳಿತುಕೊಂಡಿದ್ದಾರೆ ಎಂದು ದೂರಿದರು.