ಬೆಂಗಳೂರು, ಸೆ.30(Daijiworld News/SS): ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿಂತನೆ ಮಾಡಬೇಕಾದ ಸ್ಥಿತಿ ನನ್ನದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಾನು ಒಂದು ರೀತಿಯಲ್ಲಿ ತಂತಿ ಮೇಲೆ ನಡೆಯುತ್ತಿದ್ದೇನೆ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದರೂ ಹತ್ತಾರು ಸಲ ವಿಚಾರ ಮಾಡಬೇಕಾದ ಸ್ಥಿತಿ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿಂತನೆ ಮಾಡಬೇಕಾದ ಸ್ಥಿತಿ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಒಂದು ಕಡೆ ಬರಗಾಲ ಇದೆ. ಇನ್ನೊಂದೆಡೆ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ನೆರೆ ಬಂದಿದೆ. ನೆರೆಯಿಂದ ಸೇತುವೆ, ಮನೆ, ರಸ್ತೆಗಳು ಹಾಳಾಗಿ ಉತ್ತರ ಕರ್ನಾಟಕದ ಜನರ ಬದುಕು ಮೂರಾಬಟ್ಟೆ ಆಗಿದೆ. ಅಭಿವೃದ್ಧಿಗೆ 30 ರಿಂದ 40 ಸಾವಿರ ಕೋಟಿ ರೂ. ಇದ್ದರೂ ಸಾಲುವುದಿಲ್ಲ. ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ತಂಬಾಕಿನಿಂದ ವರ್ಷಕ್ಕೆ 10 ಸಾವಿರ ಜನ ಮೃತಪಡುತ್ತಿದ್ದು, ನಿಷೇಧ ಮಾಡುವಂತೆ ಕೆಲವರು ಮನವಿ ಸಲ್ಲಿಸಿದ್ದಾರೆ. ಒಂದು ಕಡೆ ತಂಬಾಕು ನಿಷೇಧ, ಇನ್ನೊಂದೆಡೆ ಅಡಕೆ ಬೆಳೆಗಾರರ ಬಗ್ಗೆ ಚಿಂತಿಸಬೇಕಾಗಿದೆ. ಅಡಕೆಗೆ ಬೆಲೆಯೂ ಬೇಕಿದ್ದು, ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಿದೆ. ಆದ್ದರಿಂದ ಈ ಬಗ್ಗೆ ಚರ್ಚೆ ಅಗತ್ಯವಾಗಿದ್ದು, ಹಂತ- ಹಂತವಾಗಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.