ನವದೆಹಲಿ, ಸೆ.30(Daijiworld News/SS): ಉತ್ತರಾಖಂಡ, ಜಮ್ಮು-ಕಾಶ್ಮೀರ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, 110ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಬಿಹಾರ, ಉತ್ತರ ಪ್ರದೇಶ ಸೇರಿ ದೇಶದ ಹಲವು ಭಾಗಗಳಲ್ಲಿ ನಾಲ್ಕು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಸಾವಿರಾರು ಮನೆಗಳು ಜಲಾವೃತಗೊಂಡಿವೆ. ಉತ್ತರ ಪ್ರದೇಶದಲ್ಲಿ 79 ಜನರು ಮೃತಪಟ್ಟಿದ್ದಾರೆ. ಬಿಹಾರ ರಾಜಧಾನಿ ಪಟನಾ ಪ್ರವಾಹದಿಂದ ನಲುಗಿಹೋಗಿದೆ. ಜನಜೀವನ, ರಸ್ತೆ ಮತ್ತು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಶಾಲೆ-ಕಾಲೇಜು, ಆಸ್ಪತ್ರೆಗಳ ಕಾರ್ಯಗಳಿಗೂ ತೊಂದರೆಯಾಗಿದೆ ಎನ್ನಲಾಗಿದೆ.
ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಳೆ ಬಿರುಸಾಗಿದೆ. ಬಿಹಾರದ ಪಟನಾ, ಭಾಗಲ್ಪುರ ಮತ್ತು ಕೈಮೂರ್ ಜಿಲ್ಲೆಗಳಲ್ಲಿ ಕಟ್ಟಡ ಕುಸಿತ ಹಾಗೂ ಕಟ್ಟಡಗಳ ಮೇಲೆ ಮರಗಳು ಬಿದ್ದ ಪರಿಣಾಮ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ಪಟನಾದಲ್ಲಿ ಮಂಗಳವಾರದವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಬಿಹಾರದಲ್ಲಿ ಒಟ್ಟು 18 ಎನ್'ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಈ ಪ್ರದೇಶಗಳಲ್ಲಿ ಇನ್ನೂ ಕೆಲ ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ. ಅಧಿಕೃತವಾಗಿ ಮುಗಿಯಬೇಕಿದ್ದ ನಾಲ್ಕು ತಿಂಗಳ ಅವಧಿಯ ಮುಂಗಾರು, ಇನ್ನೂ ಒಂದು ವಾರ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.