ನವದೆಹಲಿ, ಸೆ.30(Daijiworld News/SS): 2030ರ ವೇಳೆಗೆ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ವ್ಯಾಪಾರದಲ್ಲಿ ಗಮನಾರ್ಹ ವಿಸ್ತರಣೆ ತರಲು ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ನಿರ್ಧರಿಸಿದ್ದಾರೆ. ಈ ಹಿನ್ನಲೆ, ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರ ಸೌದಿ ಅರೇಬಿಯಾ ಭಾರತದಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆಗೆ ನಿರ್ಧರಿಸಿದೆ.
ಭಾರತದ ಬೆಳವಣಿಗೆ ಸಾಮರ್ಥ್ಯವನ್ನು ಪರಿಗಣಿಸಿ ವಿಶ್ವದ ಅತಿ ದೊಡ್ಡ ತೈಲ ರಫ್ತು ರಾಷ್ಟ್ರ ಸೌದಿ ಅರೇಬಿಯಾ ಭಾರತದ ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ 100 ಬಿಲಿಯನ್ ಡಾಲರ್ (7 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೌದಿ ಅರೇಬಿಯಾ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ, ಹೂಡಿಕೆ ಮಾಡಲು ಭಾರತ ಅತ್ಯಾಕರ್ಷಕ ಸ್ಥಳ. ಹೀಗಾಗಿ ತೈಲ, ಅನಿಲ, ಕೃಷಿ, ಖನಿಜ ಹಾಗೂ ಗಣಿಗಾರಿಕೆ ವಿಭಾಗದಲ್ಲಿ ಭಾರತದ ಜತೆ ದೀರ್ಘಕಾಲಿನ ಪಾಲುದಾರಿಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದೇವೆ. ಸೌದಿ ಅರೇಬಿಯಾದ ಅರಾಮ್ಕೊ ಹಾಗೂ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಜತೆಗಿನ ಸಹಭಾಗಿತ್ವ ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಇಂಧನ ಕ್ಷೇತ್ರದ ಸಂಬಂಧಗಳ ಕಾರ್ಯತಂತ್ರದ ಸ್ವರೂಪ ಪ್ರತಿಬಿಂಬಿಸುತ್ತದೆ. ತೈಲ ಪೂರೈಕೆ, ಮಾರುಕಟ್ಟೆ, ಪೆಟ್ರೋಕೆಮಿಕಲ್ಸ್ ಮೇಲೆ ಹೂಡಿಕೆ ಮಾಡುವುದು ಪ್ರಮುಖ ಭಾಗವಾಗಿದೆ ಎಂದು ತಿಳಿಸಿದ್ದಾರೆ.
ತೈಲ ಪೂರೈಕೆ, ಮಾರ್ಕೆಟಿಂಗ್, ಪೆಟ್ರೋಕೆಮಿಕಲ್ಸ್ ಮತ್ತು ಲೂಬ್ರಿಕಂಟ್ಗಳಿಗೆ ಸಂಸ್ಕರಣೆ ಮಾಡುವುದರಿಂದ ಭಾರತದ ಮೌಲ್ಯ ಸರಪಳಿಯಲ್ಲಿ ಹೂಡಿಕೆ ಮಾಡುವುದು ಅರಾಮ್ಕೊದ ಜಾಗತಿಕ ಡೌನ್ಸ್ಟ್ರೀಮ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ.