ಮೈಸೂರು, ಸೆ 30 (Daijiworld News/MSP): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ನಾಯಕರಾಗಿದ್ದು, ಕೇವಲ ಅಧಿಕಾರಕ್ಕಾಗಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ರಾಮದಾಸ್ ಹೇಳಿದ್ದಾರೆ.
ನಮ್ಮ ನಾಯಕರ ಸಾರಥ್ಯದಲ್ಲೇ ನಾವು ಮುನ್ನಡೆಯುತ್ತೇವೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ ಮತ್ತು ಅದಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಸಚಿವ ಸಂಪುಟದಲ್ಲಿ ಸ್ಥಾನಮಾನ ಅವಕಾಶ ಸಿಕ್ಕರೂ ಸಿಗದೆ ಇದ್ದರೂ ಎಂದಿಗೂ ಯಡಿಯೂರಪ್ಪ ಅವರ ಜತೆ ಇರುತ್ತೇವೆ. ಅಧಿಕಾರಕ್ಕಾಗಿ ಒತ್ತಡ ಹೇರುವ ಕೆಲಸ ಎಂದು ಮಾಡವುದಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ತಮ್ಮದು ಹಗ್ಗದ ಮೇಲಿನ ನಡಿಗೆ ಎಂದಿದ್ದಾರೆ. ಆದರೆ ಅವರ್ಯಾಕೆ ಹೀಗೆ ಹೇಳಿಕೆ ನೀಡಿದ್ದಾರೋ ತಿಳಿದಿಲ್ಲ. ಯಡಿಯೂರಪ್ಪ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡವರು ತಾವಲ್ಲ. ಅದೇನೇ ಇರಲಿ ಅವರು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ತಾವೆಲ್ಲ ಅವರ ಜತೆಗೆ ಇರುವುದಾಗಿ ಸ್ಪಷ್ಟಪಡಿಸಿದರು.