ಚೆನ್ನೈ, ಸೆ.30(Daijiworld News/SS): ದೇಶದ ಮೂಲೆ ಮೂಲೆಗಳಲ್ಲಿರುವ ಪ್ರತಿಯೊಬ್ಬ ನಾಗರಿಕರು ಕೂಡ ಭಾರತದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಡೀ ಜಗತ್ತು ಭಾರತದಿಂದ ಅಪಾರವಾದದ್ದನ್ನು ನಿರೀಕ್ಷಿಸುತ್ತಿದೆ. ಜಗತ್ತಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕಡೆಗೆ ದೇಶವನ್ನು ತಮ್ಮ ನೇತೃತ್ವದ ಸರ್ಕಾರ ಮುನ್ನಡೆಸುವ ಪಣತೊಟ್ಟಿದೆ. ದೇಶದ ಮೂಲೆ ಮೂಲೆಗಳಲ್ಲಿರುವ ಪ್ರತಿಯೊಬ್ಬ ನಾಗರಿಕರು ಕೂಡ ಭಾರತದ ಅಭಿವೃದ್ಧಿಗೆ ಶ್ರಮಿಸಬೇಕು. ಅದು ನಗರಗಳಲ್ಲಿ ಅಥವಾ ಗ್ರಾಮಗಳಲ್ಲಿ ವಾಸಿಸುತ್ತಿರುವವರಿರಬಹುದು, ಬಡವರಾಗಿರಬಹುದು, ಶ್ರೀಮಂತರಾಗಿರಬಹುದು, ಯುವಕರಾಗಿರಬಹುದು, ಹಿರಿಯರಾಗಿರಬಹುದು, ಎಲ್ಲರ ಕೊಡುಗೆಗಳಿಂದ ದೇಶ ಅಭಿವೃದ್ಧಿಯಾಗುವುದು ಎಂದರು.
ಕಳೆದ ವಾರ ಅಮೆರಿಕಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಇಡೀ ಜಗತ್ತು ಭಾರತದಿಂದ ಅಪಾರವಾದದ್ದನ್ನು ನಿರೀಕ್ಷಿಸುತ್ತಿದೆ ಎಂದು ಗೊತ್ತಾಯಿತು, ಭಾರತ ಇಂದು ಬೆಳೆಯುತ್ತಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಈ ದೇಶದ 130 ಕೋಟಿ ಭಾರತೀಯರದ್ದು ಹೌದು. ಜಗತ್ತಿಗೆ ಉಪಯೋಗವಾಗುವಂತಹ ದೇಶವನ್ನಾಗಿ ಭಾರತವನ್ನು ರೂಪಿಸಬೇಕು ಎಂದು ಹೇಳಿದರು.