ಬೆಂಗಳೂರು, ಸೆ.30(Daijiworld News/SS): ಕೇಂದ್ರ ಸರಕಾರದ ಬಳಿ ನೆರೆ ಪರಿಹಾರ ಹಣ ಕೇಳಲು ಸಹ ಧೈರ್ಯವಿಲ್ಲ. ಕೇಂದ್ರ ಸರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೆಕ್ಕೆ-ಪುಕ್ಕ ಕತ್ತರಿಸಿದೆ. ಮುಕ್ತ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಅವರನ್ನು ಕಂಡರೆ, ಅಯ್ಯೋ ಅನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಅಲ್ಪಮತದ ಸರಕಾರವಾಗಿದ್ದು, ಅನೈತಿಕವಾಗಿ ರಚನೆಗೊಂಡಿದೆ. ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದು, ಬಿಜೆಪಿ ಸರಕಾರ ಪತನವಾಗಲಿದೆ ಎಂದು ಹೇಳಿದರು.
ಮಳೆಯಿಂದ ರಾಜ್ಯದ ಬಹುತೇಕ ಭಾಗದಲ್ಲಿ ನೆರೆ ಬಂದಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆಯಾದರೂ, ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಈ ಹಿಂದೆ ನೆರೆ ಬಂದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಬಂದು ಮಧ್ಯಂತರ ಪರಿಹಾರ ಘೋಷಿಸಿದ್ದರು. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ನೆರೆ ಸಂತ್ರಸ್ತರ ನೆರವಿಗೆ ಬರುತ್ತಿಲ್ಲ. ದಪ್ಪ ಚರ್ಮದ ಈ ಸರಕಾರಗಳಿಗೆ ಕಣ್ಣು, ಮೂಗು, ಕಿವಿ ಇಲ್ಲ. ಹೀಗಾಗಿ ಯಾರ ಒತ್ತಾಯಕ್ಕೂ ಸರಕಾರ ಕಿವಿಗೊಡುತ್ತಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ''ನಾನು ಒಂದು ರೀತಿಯಲ್ಲಿ ತಂತಿ ಮೇಲೆ ನಡೆಯುತ್ತಿದ್ದೇನೆ' ಎಂಬ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 'ಯಡಿಯೂರಪ್ಪ ಅವರೇ, ತಂತಿ ಮೇಲೇಕೆ ನಡೆಯುತ್ತೀರಿ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ. ತಂತಿ ಮೇಲೆ ನಡೆಯಲು ಹೋದರೆ, ಬಿದ್ದು ಹೋಗುತ್ತೀರಿ' ಎಂದು ವ್ಯಂಗ್ಯ ಮಾಡಿದರು.