ನವದೆಹಲಿ, ಸೆ.30(Daijiworld News/SS): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ವಿಧಿ 370 ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ರವಾನೆ ಮಾಡಿದೆ. ಕಾಶ್ಮೀರದಲ್ಲಿ ಹೇರಲಾಗಿರುವ ನಿರ್ಬಂಧಗಳು, ಪತ್ರಕರ್ತರ ಪ್ರವೇಶ ಸೇರಿದಂತೆ ವಿವಿಧ ಅರ್ಜಿಗಳನ್ನೂ ಕೂಡ ಸಾಂವಿಧಾನಿಕ ಪೀಠಕ್ಕೆ ರವಾನೆ ಮಾಡಲಾಗಿದೆ.
ಎಂಡಿಎಂಕೆ ನಾಯಕ ವೈಕೋ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಅರ್ಜಿಗಳನ್ನು ಪಂಚ ಸದಸ್ಯರ ಸಾಂವಿಧಾನಿಕ ಪೀಠಕ್ಕೆ ರವಾನೆ ಮಾಡಿದೆ. ಅ.1ರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಕಾಶ್ಮೀರಕ್ಕೆ ಸಂಬಂಧಿಸಿದ ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸಲಿದೆ.
ಜಮ್ಮು ಕಾಶ್ಮೀರ ವಿಚಾರವಾಗಿ ಎಂಡಿಎಂಕೆ ಮುಖ್ಯಸ್ಥ ಹಾಗೂ ರಾಜ್ಯಸಭೆ ಸದಸ್ಯ ವೈಕೋ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅ.1ರಿಂದ ಸಾಂವಿಧಾನಿಕ ಪೀಠ ಕಾಶ್ಮೀರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲಿದ್ದು, ವೈಕೋ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಅನಗತ್ಯ ಎಂದು ಅಭಿಪ್ರಾಯಪಟ್ಟಿದೆ.
ಮಾತ್ರವಲ್ಲ, ವೈಕೋ ಅವರು ಕಾಶ್ಮೀರದ ರಾಜಕೀಯ ಮುಖಂಡರ ಗೃಹಬಂಧನವನ್ನು ವಿರೋಧಿಸಿ ಸುಪ್ರೀಂ ಕೋರ್ಟ್'ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಪ್ರಮುಖವಾಗಿ ಕಾಶ್ಮೀರ ಮಾಜಿ ಸಿಎಂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ಧುಲ್ಲಾ ಅವರ ಗೃಹ ಬಂಧವನ್ನು ಪ್ರಶ್ನೆ ಮಾಡಿದ್ದರು. ಈ ಅರ್ಜಿಗೂ ಉತ್ತರ ನೀಡಿರುವ ಸುಪ್ರೀಂಕೋರ್ಟ್, ಸರ್ಕಾರ ಅಬ್ದುಲ್ಲಾ ಅವರನ್ನು ಸಾರ್ವಜನಿಕಾ ಭದ್ರತಾ ಕಾಯ್ದೆಯಡಿ ಗೃಹ ಬಂಧನದಲ್ಲಿರಿಸಿದೆ. ವೈಕೋ ಅವರು ಸೂಕ್ತ ನ್ಯಾಯಪೀಠದ ಮುಂದೆ ಈ ಕುರಿತು ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಅರ್ಜಿಯನ್ನು ವಜಾಗೊಳಿಸಿದೆ.