ನವದೆಹಲಿ, ಸೆ 30 (Daijiworld News/MSP): " ತನ್ನನ್ನು ಕಿಡ್ನಾಪ್ ಮಾಡಿ ಭಯೋತ್ಪಾದಕ ಸಂಘಟನೆಗೆ ಸೇರಲು ಒತ್ತಾಯಿಸಲಾಗಿದೆ ಎಂಬ ವದಂತಿ, ವರದಿಗಳಿಂದ ತನಗೆ ಕಳಂಕ ಉಂಟಾಗಿದ್ದು, ತಾನು ತನ್ನ " ಪ್ರೀತಿ" ಗಾಗಿ ಯುಎಇಗೆ ಬಂದಿದ್ದೇನೆ" ಎಂದು ಕೆಲವು ವಾರಗಳ ಹಿಂದೆಯಷ್ಟೇ ಅಬುಧಾಬಿಗೆ ಪ್ರಯಾಣಿಸಿ, ಅಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ 19 ವರ್ಷದ ದೆಹಲಿಯ ಕ್ರಿಶ್ಚಿಯನ್ ಧರ್ಮದ ಯುವತಿ ಸಿಯಾನಿ ಬೆನ್ನಿ ಸ್ಪಷ್ಟಪಡಿಸಿದ್ದಾಳೆ.
ದೆಹಲಿಯಲ್ಲಿ ವಾಸವಾಗಿರುವ ಸಿಯಾನಿ ಬೆನ್ನಿಯ ಪೋಷಕರು ಮೂಲತಃ ಕೇರಳದ ಕೋಝಿಕೋಡ್ ನವರಾಗಿದ್ದು ಮಗಳು ಕಣ್ಮರೆಯ ಬೆನ್ನಲ್ಲೇ, ಸಿಯಾನಿ ಬೆನ್ನಿಯ ಪೋಷಕರು ನವದೆಹಲಿಯ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಾತ್ರವಲ್ಲದೇ ಆಕೆಯ ಕಾಲೇಜು ಸಹಪಾಠಿಗಳು, " ವಿಶ್ವದಾದ್ಯಂತ ಹಾನಿ ಉಂಟುಮಾಡುವ ಶಕ್ತಿಯೊಂದು ಭಾರತೀಯ ಪ್ರಜೆಯನ್ನು ಅಪಹರಿಸಿದೆ " ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಸಿಯಾನಿ ಬೆನ್ನಿ ಕಿಡ್ನಾಪ್ ಮಾಡಿ ಭಯೋತ್ಪಾದಕ ತಂಡದಲ್ಲಿ ಸೇರಲು ಒತ್ತಾಯಿಸಲಾಗಿದೆ ಎಂದು ವರದಿ ಪ್ರಸಾರವಾಗಿತ್ತು.
ಈ ಎಲ್ಲಾ ಬೆಳವಣಿಗೆಯ ಬಳಿಕ ಭಾನುವಾರ ಗಲ್ಫ್ ನ್ಯೂಸ್ಗೆ ಪ್ರತಿಕ್ರಿಯೆ ನೀಡಿರುವ ಸಿಯಾನಿ ಬೆನ್ನಿ, "ಇದು ನಿಜವಲ್ಲ. ನಾನು ನನ್ನ ಸ್ವಇಚ್ಚೆಯಿಂದ ಅಬುಧಾಬಿಗೆ ಬಂದಿದ್ದೇನೆ. ನನ್ನ ಮೇಲೆ ಯಾವುದೇ ಬಾಹ್ಯ ಒತ್ತಡವಿಲ್ಲ, ನಾನು ಭಾರತದ ವಯಸ್ಕ ಪ್ರಜೆಯಾಗಿದ್ದು, ನನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ" ಎಂದು ಹೇಳಿದ್ದಾರೆ.
ನವದೆಹಲಿಯ ಮೇರಿ ಆಂಡ್ ಜೀಸಸ್ ಕಾಲೇಜಿನಲ್ಲಿ ಸಿಯಾನಿ ಅಂತಿಮ ಪದವಿ ವಿದ್ಯಾರ್ಥಿನಿಯಾಗಿದ್ದು, ನಾಪತ್ತೆಯಾಗುವ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 11 ಗಂಟೆಯವರೆಗೆ ತರಗತಿಗೆ ಹಾಜರಾಗಿದ್ದರು. ಆದರೆ ಆ ಬಳಿಕ ಅದೇ ದಿನ ಮಧ್ಯಾಹ್ನ, 2.45ರ ವೇಳೆಗೆ ಗೋ-ಏರ್ ವಿಮಾನವನ್ನೇರಿ ಅಬುಧಾಬಿಗೆ ಪ್ರಯಾಣಿಸಿದ್ದರು.
ಸಿಯಾನಿ ಒಂಬತ್ತು ತಿಂಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡು ಪ್ರೀತಿಗೆ ತಿರುಗಿದ್ದ, ಭಾರತೀಯ ಮೂಲದ ವ್ಯಕ್ತಿಯನ್ನು ಮದುವೆಯಾಗಲು ಅಬುಧಾಬಿಗೆ ಪ್ರಯಾಣಿಸಿದ್ದರು .
" ಸ್ವಂತ ಇಚ್ಚಾಶಕ್ತಿಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಆ ಧರ್ಮವನ್ನು ಒಪ್ಪಿಕೊಂಡಿದ್ದೇನೆ. ಅದೇ ನಂಬಿಕೆಯೊಂದಿಗೆ ನಾನು ಇನ್ನು ಮುಂದೆ ಜೀವನ ಸಾಗಿಸುತ್ತೇನೆ ಎಂದು ಸೆಪ್ಟೆಂಬರ್ 24 ರಂದು ಅಬುಧಾಬಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವುದಾಗಿ ಗಲ್ಫ್ ನ್ಯೂಸ್ ಗೆ ಸಿಯಾನಿ ಬೆನ್ನಿ ಹೇಳಿಕೆ ನೀಡಿದ್ದಾಳೆ. ತನ್ನನ್ನು ಅಪಹರಿಸಿ ಭಯೋತ್ಪಾದಕ ಸಂಘಟನೆಗೆ ಸೇರಿಸಲಾಗಿದೆ ಎನ್ನುವುದು "ಸುಳ್ಳು ಸುದ್ದಿ". ಹೀಗೆ ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ತಮ್ಮ ಹೇಳಿಕೆಯಲ್ಲಿ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತನ್ನ ಸಹೋದರ ಹಾಗೂ ಪೋಷಕರು ನನ್ನನ್ನು ಭೇಟಿಯಾಗಲು ಅಬುಧಾಬಿಗೆ ಬರುತ್ತಿದ್ದಾರೆ. ಆದರೆ ನಾನು ಹಿಂತಿರುಗಲು ಬಯಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅಲ್ಲದೆ ವಿವಾಹವಾಗಿ ಯುಎಇಯಲ್ಲಿ ವಾಸಿಸಲು ಬಯಸುತ್ತೇನೆ" ಎಂದು ಗಲ್ಫ್ ನ್ಯೂಸ್ ಗೆ ತಿಳಿಸಿದ್ದಾರೆ.